ಉನ್ನತ ಶಿಕ್ಷಣ ದಾಖಲಾತಿ: ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಕೊನೆಯ ಸ್ಥಾನ
ಬೆಂಗಳೂರು, ಫೆಬ್ರವರಿ 22: ಕರ್ನಾಟಕವು ದೇಶದ ಅತ್ಯಂತ ಪ್ರಗತಿಪರ ಮತ್ತು ಉತ್ತಮ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದ್ದರೂ ಕೂಡ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣದಲ್ಲಿ ಹಿಂದುಳಿದಿದೆ.
ಉನ್ನತ ಶಿಕ್ಷಣದ ಕುರಿತು ನಡೆಸಿದ ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಷನ್ (ಎಐಎಸ್‌ಎಚ್‌ಇ) 2019-20ರ ಪ್ರಕಾರ, ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವ ಸಂಖ್ಯೆಯಲ್ಲಿ ಶೇ.31.58ರಷ್ಟು ಪುರುಷರು, ಶೇ.32. 80 ಅಷ್ಟು ಮಹಿಳೆಯರಿದ್ದಾರೆ. ಉನ್ನತ ಶಿಕ್ಷಣ ವಿಚಾರದಲ್ಲಿ ಕರ್ನಾಟಕದಲ್ಲಿ ದೇಶದಲ್ಲೇ 13ನೇ ಸ್ಥಾನದಲ್ಲಿದೆ.
ಸಿಕ್ಕಿಂನಲ್ಲಿ ಶೇ.83.60ರಷ್ಟು ಪುರುಷರು, 67.60ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದು, ಮೊದಲ ಸ್ಥಾನದಲ್ಲಿದೆ. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕವು ಕೊನೆಯ ಸ್ಥಾನದಲ್ಲಿದೆ, ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ಶೇ.51.80ರಷ್ಟು ಪುರುಷರು, ಶೇ.51ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ಇನ್ನು ಕೇರಳದಲ್ಲಿ ಶೇ.32.90ರಷ್ಟು ಪುರುಷರು, ಶೇ.44.70ರಷ್ಟು ಮಹಿಳೆಯರು, ತೆಲಂಗಾಣದಲ್ಲಿ ಶೇ.34.80 ರಷ್ಟು ಪುರುಷರು, ಶೇ. 36.40ರಷ್ಟು ಮಹಿಳೆಯರು, ಆಂಧ್ರಪ್ರದೇಶದಲ್ಲಿ ಶೇ.38.30ರಷ್ಟು ಪುರುಷರು, ಶೇ.32.70ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಉನ್ನತ ಶಿಕ್ಷಣದಲ್ಲಿ 18-23 ವರ್ಷವಯಸ್ಸಿನವರನ್ನು ಲೆಕ್ಕ ಹಾಕಲಾಗುತ್ತದೆ, ಇದು ಒಂದು ನಿರ್ದಿಷ್ಟ ಶಾಲಾ ವರ್ಷದಲ್ಲಿ ಅರ್ಹ ಅಧಿಕೃತ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ವಯಸ್ಸನ್ನು ಲೆಕ್ಕಿಸದೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯಾಗಿದೆ.
ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ಮಟ್ಟದ ಭಾಗವಹಿಸುವಿಕೆಯನ್ನು ತೋರಿಸಲು GER ಬಳಕೆ ಮಾಡಲಾಗುತ್ತದೆ. ಉಡುಪಿಯಲ್ಲಿ ಶೇ.73.13ರಷ್ಟು ಪುರುಷರು ಹಾಗೂ ಶೇ.64.22ರಷ್ಟು ಮಹಿಳೆಯರು, ದಕ್ಷಿಣ ಕನ್ನಡದಲ್ಲಿ ಶೇ.61.86ರಷ್ಟು ಪುರುಷರು, ಶೇ.72.39ರಷ್ಟು ಮಹಿಳೆಯರು, ಮತ್ತು ಚಾಮರಾಜನಗರದಲ್ಲಿ ಶೇ.10.58ರಷ್ಟು ಪುರುಷರು ಹಾಗೂ ಶೇ.13.34ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
2019-20ರಲ್ಲಿ ಮಹಿಳೆಯರ ಜಿಇಆರ್ ಶೇಕಡಾ 27.3 ರಷ್ಟಿದ್ದರೆ, ಪುರುಷರದ್ದು ಶೇ 26.9 ರಷ್ಟಿತ್ತು. ಇದರರ್ಥ ಪುರುಷರಿಗೆ ಹೋಲಿಸಿದರೆ ಹೆಚ್ಚು ಅರ್ಹ ಮಹಿಳೆಯರು ಭಾರತದಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2019-20ರಲ್ಲಿ ಒಟ್ಟು ದಾಖಲಾತಿಯ ಶೇಕಡಾ 49 ರಷ್ಟು ಮಹಿಳಾ ವಿದ್ಯಾರ್ಥಿಗಳು.
ಜಿಇಆರ್ ಅನ್ನು ಹೆಚ್ಚಿಸುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಎನ್‌ಇಪಿಯಲ್ಲಿ ಸೇರಿಸಲಾದ ವಿವಿಧ ಸುಧಾರಣೆಗಳ ಮೂಲಕ 2035 ರ ವೇಳೆಗೆ ಶೇ 50 ರಷ್ಟು ಜಿಇಆರ್ ಸಾಧಿಸುವ ನಿರೀಕ್ಷೆ ಕೇಂದ್ರ ಸರ್ಕಾರಕ್ಕಿದೆ.
2018-19ರಲ್ಲಿ ದಲ್ಲಿದ್ದ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ 3.74 ಕೋಟಿಗೆ ಹೋಲಿಸಿದರೆ 2019-20ರಲ್ಲಿ 3.85 ಕೋಟಿ ಆಗಿದ್ದು, 11.36 ಲಕ್ಷ (3.04 ಶೇಕಡಾ) ಬೆಳವಣಿಗೆಯನ್ನು ದಾಖಲಿಸಿದೆ. 2014-15ರಲ್ಲಿ ಈ ಸಂಖ್ಯೆ 3.42 ಕೋಟಿ ಆಗಿತ್ತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಇಆರ್ 2018-19ರಲ್ಲಿ ಕ್ರಮವಾಗಿ ಶೇ 23 ಮತ್ತು ಶೇ 17.2 ರಷ್ಟಿತ್ತು. 2019-20ರಲ್ಲಿ ಕ್ರಮವಾಗಿ ಶೇಕಡಾ 23.4 ಮತ್ತು ಶೇಕಡಾ 18 ರಷ್ಟಿದೆ.
ಉನ್ನತ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಜಿಇಆರ್ ಮಾತ್ರವಲ್ಲದೆ ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ)ಸಹ 2019-20ರ ಶೈಕ್ಷಣಿಕ ಸಾಲಿನಲ್ಲಿ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸುತ್ತದೆ.
2018-20ರಲ್ಲಿದ್ದ ಜಿಪಿಐ ಶೇಕಡಾ 1.0 ಕ್ಕೆ ಹೋಲಿಸಿದರೆ 2019-20ರ ಜಿಪಿಐ ಶೇಕಡಾ 1.01 ರಷ್ಟಿತ್ತು. ಇದರರ್ಥ ಪುರುಷರಿಗೆ ಹೋಲಿಸಿದರೆ ಹೆಚ್ಚು ಅರ್ಹ ಮಹಿಳೆಯರು ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹಾಜರಾಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಜಿಪಿಐ ಬೆಳವಣಿಗೆ ಸ್ಥಿರವಾಗಿದೆ. 2015-16ರಲ್ಲಿ ಜಿಪಿಐ ಶೇಕಡಾ 0.92 ರಷ್ಟಿತ್ತು. ಆ ನಂತರ ಅದು ನ ನಿರಂತರವಾಗಿ ಏರುಗತಿಯಲ್ಲಿದ್ದು 2019-20ನೇ ಸಾಲಿನಲ್ಲಿ ಶೇ 1.01 ಕ್ಕೆ ತಲುಪಿದೆ.
2019-20ರಲ್ಲಿ, ಪದವಿಪೂರ್ವ ಮಟ್ಟದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಕಲೆ / ಮಾನವಿಕ / ಸಮಾಜ ವಿಜ್ಞಾನ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ . ಈ ವಿಭಾಗಕ್ಕೆ ಶೇಕಡಾ 32.7 ವಿದ್ಯಾರ್ಥಿಗಳು ದಾಖಲಾಗಿದ್ದರೆ, ವಿಜ್ಞಾನದಲ್ಲಿ 16 ಶೇಕಡಾ ಮತ್ತು ವಾಣಿಜ್ಯದಲ್ಲಿ 14.9 ಶೇಕಡಾ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು AISHE ವರದಿ ಹೇಳಿದೆ.
ಪಿಎಚ್‌ಡಿ ಮಟ್ಟದಲ್ಲಿ, ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗಕ್ಕೆ ದಾಖಲಾಗುತ್ತಾರೆ ಮತ್ತು ನಂತರ ಸ್ಥಾನದಲ್ಲಿ ವಿಜ್ಞಾನ ವಿಭಾಗವಿದೆ. ಕಳೆದ ಐದು ವರ್ಷಗಳಲ್ಲಿ ಪಿಎಚ್‌ಡಿ ಅಭ್ಯರ್ಥಿಗಳ ಸಂಖ್ಯೆಯೂ ಶೇಕಡಾ 60 ರಷ್ಟು ಹೆಚ್ಚಾಗಿದೆ ಎಂದೂ ವರದಿ ತಿಳಿಸಿದೆ. ಅಲ್ಲದೆ ಭಾರತದಲ್ಲಿ 168 ದೇಶಗಳ 49,348 ವಿದೇಶಿ ವಿದ್ಯಾರ್ಥಿಗಳು ಸಹ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.












Click it and Unblock the Notifications