Karnataka Poll: ಚುನಾವಣೆಗಾಗಿ ಬಿಗಿ ಭದ್ರತೆ: ನೂರಾರು ಕೋಟಿ ಹಣ, ಉಡುಗೊರೆಗಳು ವಶಕ್ಕೆ
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಸೋಮವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಮನೆ ಮನೆ ಪ್ರಚಾರಕ್ಕೆ ಅನುಮತಿ ನೀಡಲಾಗಿದೆ. ಒಂದು ಕಡೆ ಅಭ್ಯರ್ಥಿಗಳು ಕೊನೆ ಹಂತದಲ್ಲಿ ಮತದಾರರ ಮನ ಗೆಲ್ಲಲು ಕಸರತ್ತು ಮಾಡುತ್ತಿದ್ದರೆ, ಮತ್ತೊಂದು ಕಡೆ ಚುನಾವಣಾಧಿಕಾರಿಗಳು ಯಾವುದೇ ಗೊಂದಲವಿಲ್ಲದೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಬಾರಿ ಚುನಾವಣೆಗಾಗಿ ಯಾವುದೇ ಲೋಪ ಬರದಂತೆ ಸುರಕ್ಷಿತವಾಗಿ ಮತದಾನಕ್ಕಾಗಿ ಭಾರಿ ಬಂದೋಬಸ್ತ್ ಮಾಡಲಾಗುತ್ತದೆ. ರಾಜ್ಯಾದ್ಯಂತ ಚುನಾವಣೆ ಭದ್ರತೆಗಾಗಿ 1.60 ಲಕ್ಷ ಸಿಬ್ಬಂದಿಯನ್ನು ನಿಯೋಜನೆ ಮಾಡಿರುವುದಾಗಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಭದ್ರತೆ ನೀಡಲು ಅಕ್ಕಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ಗೋವಾ ಮತ್ತು ತಮಿಳುನಾಡಿನಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಚುನಾವಣಾಧಿಕಾರಿಗಳ ಮಾನದಂಡಗಳ ಪ್ರಕಾರ ಭದ್ರತೆ ಒದಗಿಸಲಾಗಿದ್ದು, ಇಷ್ಟು ಪ್ರಮಾಣದಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಭದ್ರತೆ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಭದ್ರತೆಗಾಗಿ 304 ಡಿವೈಎಸ್‌ಪಿ, 991 ಪೊಲೀಸ್ ಇನ್ಸ್‌ಪೆಕ್ಟರ್, 2,610 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 5,803 ಎಎಸ್‌ಐ, 84,000 ಸಿಬ್ಬಂದಿ ಜೊತೆಯಲ್ಲಿ, 8500 ಹೋಮ್‌ಗಾರ್ಡ್‌ಗಳು, ಸಿಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಾಮುಂಡೇಶ್ವರಿ, ವರುಣಾ, ಹಾಸನ, ಚನ್ನಪಟ್ಟಣ, ಕನಕಪುರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಅಹಿತ ಘಟನೆ ನಡೆಯಂತೆ ನಿಗಾ ಇಡಲಾಗಿದೆ. ಈ ಬಾರಿ ರಾಜ್ಯದಲ್ಲಿ 11,617 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.
ಬೆಂಗಳೂರಿನಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್
ಬೆಂಗಳೂರು ನಗರದಲ್ಲೇ ಮತದಾನದ ದಿನ 16000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ನಗರದಲ್ಲಿ 7916 ಮತಗಟ್ಟೆಗಳಿದ್ದು, 1907 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. 4900ಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗಾಗಿ ಕೇಂದ್ರದಿಂದ ನಿಯೋಜನೆ ಮಾಡಲಾಗಿದೆ.
ನೂರಾರು ಕೋಟಿ ಚುನಾವಣಾ ಅಕ್ರಮ
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಅಕ್ರಮ ಚಟುವಟಿಕೆ ಮೇಲೆ ಕಣ್ಣಿಟ್ದಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ಅಭ್ಯರ್ಥಿಗಳು ಮತ್ತು ಆಪ್ತರ ಚಲವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ವ್ಯಾಪಕ ತಪಾಸಣೆ ಮಾಡಲಾಗಿದೆ.
ಈವರೆಗೆ ರಾಜ್ಯದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನೂರಾರು ಕೋಟಿ ಹಣವನ್ನು ಮತ್ತು ನೂರಾರು ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 105 ಕೋಟಿ ರುಪಾಯಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದು, 230 ಕೋಟಿ ಮೌಲ್ಯದ ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಲ್ಲಿ ಇದುವರೆಗೂ 10.93 ಕೋಟಿ ರುಪಾಯಿ ನಗದು ವಶಕ್ಕೆ ಪಡೆದಿದ್ದು, 28.5 ಕೆಜಿ ಬಂಗಾರ, 140 ಕೆಜಿ ಬೆಳ್ಳಿ, 9.72 ಕೋಟಿ ರುಪಾಯಿ ಮೌಲ್ಯದ ಉಡುಗೊರೆಗಳು, 29.51 ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications