ಬಿಬಿಎಂಪಿ ಕಾಯಿದೆ 2020; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬಿಬಿಎಂಪಿ ಕಾಯಿದೆ 2020ರ ವಿವಿಧ ಸೆಕ್ಷನ್‌ಗಳು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿವೆ ಎಂಬ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಬೆಂಗಳೂರು, ಮಾರ್ಚ್ 01; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಯಿದೆ 2020ರ ವಿವಿಧ ಸೆಕ್ಷನ್‌ಗಳು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕಾಯಿದೆಯನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಸಿಟಿಜನ್ ಆಕ್ಷನ್ ಫೋರಂ ಎಂಬ ಸರ್ಕಾರೇತರ ಸಂಘ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್‌ಗಳಾದ 75,76, 77, 78, 79 ಮತ್ತು 86 ಸಂವಿಧಾನದ ಮೂಲ ಆಶಯಗಳನ್ನು ಉಲ್ಲಂಘಿಸಿವೆ. ಹೀಗಾಗಿ ಕಾಯಿದೆಯನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆಗೆ ತಂದಿತ್ತು. ಆದ್ದರಿಂದ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಿಬಿಎಂಪಿ ಕಾಯಿದೆಯ ಸೆಕ್ಷನ್ 75 ಮತ್ತು 77ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ರಚನೆ ಮಾಡಿರುವ ಕ್ಷೇತ್ರ ಸಮಾಲೋಚನಾ ಸಮಿತಿ ಮತ್ತು ವಲಯ ಸಮಿತಿಗಳು ಸಂವಿಧಾನ ಅಡಿಯಲ್ಲಿ ರಚನೆ ಮಾಡಿರುವ ವಾರ್ಡ್ ಸಮಿತಿಗೆ ನೀಡಿರುವ ಅಧಿಕಾರವನ್ನು ಕಿತ್ತುಕೊಳ್ಳಲಿದೆ ಎಂದರು.
ಸಂವಿಧಾನದ ಪರಿಚ್ಛೇದ 243- ಎಸ್‌ನಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪುರಸಭೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಬಿಬಿಎಂಪಿ ಕಾಯಿದೆ ಪ್ರಕಾರ ರಚನೆ ಮಾಡಿರುವ ಸಮಿತಿಗಳ ಸಂವಿಧಾನದ ಬಾಹಿರವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಬಿಬಿಎಂಪಿ ವಾರ್ಡ್‌ಗಳು ಹೆಚ್ಚಳ; ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡಿದೆ. ಈ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿ ತಂದಿದೆ. ನೂತನ ಕಾಯ್ದೆ ಅನ್ವಯ ಬಿಬಿಎಂಪಿ ಸುತ್ತಲಿನ 1 ಕಿ. ಮೀ. ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ, ಗ್ರಾಮ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗುತ್ತದೆ.
ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಅವಧಿಯನ್ನು 1 ರಿಂದ ಎರಡೂವರೆ ವರ್ಷಗಳಿಗೆ ಏರಿಕೆ ಮಾಡಲಾಗಿದೆ. ಬಿಬಿಎಂಪಿ ಆಯುಕ್ತ ಹುದ್ದೆಯನ್ನು ಮುಖ್ಯ ಆಯುಕ್ತ ಎಂದು ಬದಲಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲದವರನ್ನು ಬಿಬಿಎಂಪಿ ಮುಖ್ಯ ಆಯುಕ್ತರಾಗಿ ನೇಮಕ ಮಾಡಬೇಕಿದೆ.
ಹೊಸ ತಿದ್ದುಪಡಿ ಕಾಯ್ದೆ ಅನ್ವಯ ರಾಜಕೀಯ ಕಾರಣಗಳಿಗೆ ಬಿಬಿಎಂಪಿ ಆಯುಕ್ತರನ್ನು ನೇಮಕ, ವರ್ಗಾವಣೆ ಮಾಡುವಂತಿಲ್ಲ. ಮುಖ್ಯ ಆಯುಕ್ತರ ಅವಧಿ ಎರಡು ವರ್ಷಗಳಿಗೆ ಕಡಿಮೆ ಇಲ್ಲದಂತೆ ನೇಮಕ ಮಾಡಬೇಕು. ಆಯುಕ್ತರ ಕಾರ್ಯ ತೃಪ್ತದಾಯಕವಾಗಿದ್ದರೆ ಮುಂದುವರೆಸಲು ಸಹ ಅವಕಾಶವಿದೆ. ಅವಧಿಗೂ ಮೊದಲೇ ವರ್ಗಾವಣೆ ಮಾಡಲು ಸೂಕ್ತ ಕಾರಣಗಳನ್ನು ಸಹ ನೀಡಬೇಕಿದೆ.











Click it and Unblock the Notifications