ಬಿಜೆಪಿ ಭಿನ್ನಮತದ ಬಗ್ಗೆ ಹೈಕಮಾಂಡ್‌ಗೆ ಹೇಳಿದ್ದರೂ.. ಡಿ.ವಿ ಸದಾನಂದ ಗೌಡ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿನ ಭಿನ್ನಮತ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ತೀವ್ರ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಆದರೆ, ಈ ಇಬ್ಬರು ನಾಯಕರು ಮಾತ್ರವಲ್ಲಿ ಬಿಜೆಪಿಯಲ್ಲಿ ಭಿನ್ನಮತದ ಪ್ರಮಾಣ ದೊಡ್ಡದಾಗಿದೆ. ಅಲ್ಲದೇ ಇನ್ನೂ ಹಲವು ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಬಿಜೆಪಿ ನಾಯಕರ ನಡುವೆ ವಾಕ್ಸಮರ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಿದೆ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಮಸ್ಯೆಯ ಬಗ್ಗೆ ನಾನು ಎರಡು ಬಾರಿ ಹೈಕಮಾಂಡ್‌ಗೆ ಪತ್ರ ಬರೆದರೂ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯದ ಬಿಜೆಪಿಯಲ್ಲಿ ಸಾಕಷ್ಟು ಗೊಂದಲದ ವಾತಾವರಣ ಇದೆ. ಬಿಜೆಪಿಯ ಹಿರಿಯ ನಾಯಕರು ಒಬ್ಬರ ಮುಂದೆ ಒಬ್ಬರು ಹೇಳಿಕೆಗಳನ್ನು ಕೊಡುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹತಾಶೆ ಮೂಡಿಸಿದೆ. 2023ನೇ ಸಾಲಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಚುನಾವಣೆ ಪೂರ್ವ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ತೀವ್ರ ಮುಜುಗರದಿಂದ ಕೊನೆಯ ಕ್ಷಣದಲ್ಲಿ ಪಾರಾಗಿತ್ತು. ಆದರೆ, ಈಚೆಗೆ ನಡೆದ ಮೂರು ವಿಧಾನಸಭೆಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲಿ ಒಂದರಲ್ಲೂ ಗೆಲ್ಲುವುದಕ್ಕೆ ಬಿಜೆಪಿಯಿಂದ ಸಾಧ್ಯವಾಗಿಲ್ಲ.

ಇದರ ಬೆನ್ನಲ್ಲೇ ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಇದೀಗ ಸದಾನಂದ ಗೌಡ ಅವರು ಸ್ಫೋಟಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ಬಂದಿರುವ ಸ್ಥಿತಿ ನೋಡಿದರೆ ದುರಂತವೆನಿಸುತ್ತದೆ ಅಲ್ಲದೇ ಇದು ಅತ್ಯಂತ ನೋವಿನ ಸಂಗತಿಯಾಗಿದೆ. ನಾನು ಈ ವಿಷಯವನ್ನು ಬಿಜೆಪಿ ಹೈಕಮಾಂಡ್‌ಗೂ ತಂದಿದ್ದೇನೆ. ಅಲ್ಲದೇ ಎರಡು ಬಾರಿ ಬಿಜೆಪಿ ಕೋರ್ ಕಮಿಟಿ ಅಧ್ಯಕ್ಷನಾಗಿ ನಾನು ಸಹ ಇದನ್ನು ನಿಲ್ಲಿಸಲು ಪ್ರಯತ್ನಿಸಿದ್ದೇನೆ.
ಈಗಾಗಲೇ ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್‌ಗೆ ಎರಡು ಬಾರಿ ಪತ್ರ ಬರೆದಿದ್ದೇನೆ ಆದರೆ, ಇಲ್ಲಿಯ ವರೆಗೆ ಹೈಕಮಾಂಡ್‌ನಿಂದ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಅಪ್ಪ & ಮಕ್ಕಳ ವ್ಯಾಮೋಹ ಬಿಡಲಿ: ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯ ಹೈಕಮಾಂಡ್‌ನ ಮೇಲೂ ಗುಡುಗಿದ್ದಾರೆ. ಬಿಜೆಪಿ ಹೈಕಮಾಂಡ್ ಅಪ್ಪ ಮತ್ತು ಮಕ್ಕಳ ಮೇಲಿನ ವ್ಯಾಮೋಹವನ್ನು ಬಿಡಬೇಕು ಎಂದು ಗುಡುಗಿದ್ದಾರೆ. ಅಲ್ಲದೇ ಬಿ.ವೈ ವಿಜಯೇಂದ್ರ ಅವರು ಸಹ ಯತ್ನಾಳ್ ಮೇಲೆ ಕಿಡಿಕಾರಿದ್ದಾರೆ. ಪ್ರತಿದಿನ ಬಿಜೆಪಿ ನಾಯಕರು ಅವರಲ್ಲೇ ಕಿತ್ತಾಡುತ್ತಿರುವುದು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ.

ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ಆಯ್ಕೆಯಾದ ಮೇಲೆ ಬಿಜೆಪಿಯಲ್ಲಿ ಒಂದು ಬಣ ಮೊದಲಿನಿಂದಲೂ ಅವರ ಆಯ್ಕೆಯನ್ನು ಪ್ರಶ್ನಿಸುತ್ತಿದೆ. ಆದರೆ, ಬಿ.ವೈ ವಿಜಯೇಂದ್ರ ಅವರು ಸಹ ಈ ಭಿನ್ನಮತಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಆರೋಪ ಇದೆ.












Click it and Unblock the Notifications