ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ; ಕೆಪಿಸಿಸಿಗೆ ಹೊಸ ಕಾರ್ಯಾಧ್ಯಕ್ಷರ ನೇಮಕ? ಹರಿಪ್ರಸಾದ್ ಗೆ ಯಾವ ಹೊಣೆ!?
ಬೆಂಗಳೂರು, ಆಗಸ್ಟ್ 01: ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವರು ಹಾಗೂ ಶಾಸಕರ ನಡುವೆ ಅಸಮಾಧಾನ ಭುಗಿಲೆದ್ದಿದ್ದು, ಇತ್ತ ಕೆಲ ಸಚಿವರಿಗೆ ಎರಡೆರಡು ಜವಾಬ್ದಾರಿಯನ್ನ ನಿರ್ವಹಿಸುವುದು ಕಷ್ಟ ಸಾಧ್ಯವೆಂದು ಹೈಕಮಾಂಡ್ ಬಳಿ ಹೇಳಿಕೊಂಡಿದ್ದು, ಇದೀಗ ಹೈಕಮಾಂಡ್ ಸಣ್ಣ ಸರ್ಜರಿಗೆ ಚಿಂತನೆಯನ್ನ ನಡೆಸಿದೆ.
ಹೌದು, ಲೋಕಸಭಾ ಚುನಾವಣೆ ಹಾಗೂ ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಕೆಪಿಸಿಸಿಗೆ ಮೂವರು ಹೊಸ ಕಾರ್ಯಾಧ್ಯಕ್ಷರ ನೇಮಕ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಒಟ್ಟು ಐವರು ಕಾರ್ಯಾಧ್ಯಕ್ಷರ ಪೈಕಿ ಮೂವರು ಸಚಿವರಾಗಿರುವ ಹಿನ್ನಲೆಯಲ್ಲಿ ದೊಡ್ಡ ಇಲಾಖೆಯ ಜವಾಬ್ದಾರಿಯೊಂದಿಗೆ ಪಕ್ಷದ ಕೆಲಸ ನಿಭಾಯಿಸುವುದು ಕಷ್ಟ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕಷ್ಟ ಸಾಧ್ಯ ಎಂದು ಹೇಳಲಾಗಿದ್ದು, ಈ ಹಿನ್ನಲೆಯಲ್ಲಿ ಬೇರೆಯವರಿಗೆ ಈ ಜವಾಬ್ದಾರಿ ನೀಡುವ ಮೂಲಕ ಹೊಸ ಕಾರ್ಯಾಧ್ಯಕ್ಷ ನೇಮಕಕ್ಕೆ ಹೈಕಮಾಂಡ್ ಚಿಂತನೆ ನಡೆಸಿದೆ.

ಈಗಾಗಲೇ ಕಾರ್ಯಾಧ್ಯಕ್ಷರ ಪೈಕಿ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇನ್ನು ಸಲೀಂ ಅಹ್ಮದ್, ಚಂದ್ರಪ್ಪ ಅವರು ಕೂಡಾ ಕಾರ್ಯಾಧ್ಯಕ್ಷರಾಗಿದ್ದಾರೆ. ಇದೀಗ ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹೈಕಮಾಂಡ್ ಪ್ಲಾನ್ ಹಾಕಿಕೊಂಡಿದ್ದು, ಮೂವರು ಸಚಿವರ ಅಭಿಪ್ರಾಯವನ್ನ ಕೇಳಿದರುವ ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ಕಾರ್ಯಾಧ್ಯಕ್ಷ ಸ್ಥಾನದಿಂದ ಮುಕ್ತ ಮಾಡಲು ಮುಂದಾಗಿದೆ.
ಇನ್ನೂ ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿಲಿದ್ದು, ಲೋಕಸಮರಕ್ಕೆ ಸಿದ್ದತೆಗಳಿಗೆ ವೇಗ ಕೊಡಬೇಕಿದೆ. ಈ ನಿಟ್ಟಿನಲ್ಲಿ ಮೂವರು ಸಚಿವರಿಗೆ ಕಾರ್ಯಾಧ್ಯಕ್ಷ ಹುದ್ದೆಯಿಂದ ಮುಕ್ತ ಮಾಡುವ ಮೂಲಕ ಹೊಸ ನಾಯಕರಿಗೆ ಈ ಹುದ್ದೆಯನ್ನ ನೀಡಿ ಸಂಘಟನೆಯಲ್ಲಿ ಕೆಲವು ಬದಲಾವಣೆ ಮಾಡುವ ಚಿಂತನೆಯನ್ನ ಹೈಕಮಾಂಡ್ ಹಾಕಿಕೊಂಡಿದೆ.
ಈಗಾಗಲೇ ಆಗಸ್ಟ್ 2 ರಂದು ದೆಹಲಿ ಹೈಕಮಾಂಡ್ ಸಚಿವರು ಹಾಗೂ ಶಾಸಕರು ಸೇರಿದಂತೆ ಹಲವು ನಾಯಕರಿಗೆ ಬುಲಾವ್ ನೀಡಿದ್ದು, ಸಚಿವರು ಹಾಗೂ ಮುಖಂಡರ ದೆಹಲಿ ಭೇಟಿ ವೇಳೆ ಈ ವಿಷಯ ಕೂಡ ಚರ್ಚೆಗೆ ಬರಲಿದೆ. ಬಳಿಕ ಅಭಿಪ್ರಾಯ ಸಂಗ್ರಹ ಕೂಡ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನೂ ಕಾರ್ಯಾಧ್ಯಕ್ಷರಾಗಿರುವ ಸಲೀಂ ಅಹ್ಮದ್ ಅವರು ಈ ಬಾರೀ ಲೋಕಸಭೆ ಚುನಾವಣೆಗೆ ಹಾವೇರಿಯಿಂದ ಕಣಕ್ಕಿಳಿಯುವ ಆಸೆಯನ್ನ ಹೊಂದಿದ್ದು, ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಖಚಿತವಾದರೇ ಕಾರ್ಯಾಧ್ಯಕ್ಷ ಸ್ಥಾನ ನಿರ್ವಹಣೆ ಕಷ್ಟವಾಗಲಿದೆ ಎಂದು ಹೇಳಲಾಗಿದೆ.
ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಬಿ ಕೆ ಹರಿ ಪ್ರಸಾದ್ ಅವರಿಗೆ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಸಚವ ಸ್ಥಾನ ಕೈ ತಪ್ಪಿದ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದವಾಗಿ ಬಹಿರಂಗವಾಗಿ ಅಸಮಾಧಾನವನ್ನ ಹೊರ ಹಾಕಿದ್ದು, ನನಗೆ ಮುಖ್ಯಮಂತ್ರಿ ಮಾಡುವುದು ಗೊತ್ತಾ, ಆ ಸ್ಥಾನದಿಂದ ಕೆಳಗಿಳಿಸುವುದು ಗೊತ್ತು ಎಂದು ಸಿದ್ದರಾಮಯ್ಯ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದ ಬಿ ಕೆ ಹುರಿಪ್ರಸಾದ್ ಗೂ ಹೈಕಮಾಂಡ್ ಬುಲಾವ್ ನೀಡಿದ್ದು, ಬಿ.ಕೆ.ಹರಿಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದಲ್ಲಿ ಅಥವಾ ಪಕ್ಷದಲ್ಲಿ ಉತ್ತಮ ಜವಾಬ್ದಾರಿ ನೀಡಲು ಹೈಕಮಾಂಡ್ ಮುಂದಾಗಿದೆ ಎಂದು ಹೇಳಲಾಗಿದೆ.












Click it and Unblock the Notifications