ವೈದ್ಯರು ನೀಡುವ ಚಿಕಿತ್ಸೆಯ ಮೇಲೆ ರೋಗಿಗೆ ನಂಬಿಕೆಯಿಲ್ಲದಿದ್ದರೆ: ಮುಂದಾ?
ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ಹಾವಳಿ ಹೆಚ್ಚಾದ ನಂತರ ಬೆಡ್ ಸಮಸ್ಯೆ, ಆಕ್ಸಿಜನ್ ಹಾಹಾಕಾರದ ನಡುವೆ, ವೈದ್ಯರ ಮೇಲೆ ದಾಳಿ ಆಗುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿದೆ.
ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ವಿರೋಧಿಸಿ, ಇತ್ತೀಚೆಗೆ (ಜೂನ್ 18) ಡಾಕ್ಟರ್ಸ್ ಗಳು ಸಾಂಕೇತಿಕ ಪ್ರತಿಭಟನೆಯನ್ನೂ ನಡೆಸಿದ್ದರು. ಸರಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿತ್ತು.
ಆಸ್ಪತ್ರೆಯ ಬಿಲ್ ಜಾಸ್ತಿ, ರೋಗಿ ಮೃತ ಪಡುವುದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಇರುವುದು, ಈ ಮುಂತಾದ ಕಾರಣಕ್ಕಾಗಿ ವೈದ್ಯರು ಮತ್ತು ಆಸ್ಪತ್ರೆಯ ಮೇಲೆ ದಾಳಿ ನಡೆಯುತ್ತಿದೆ.
ವೈದ್ಯರ ಮೇಲೆ ದಾಳಿ ನಡೆಯುತ್ತಿರುವುದು, ರೋಗಿಗೆ ನೀಡುತ್ತಿರುವ ಚಿಕಿತ್ಸೆಯ ಮೇಲೆ ರೋಗಿಯ ಕಡೆಯವರಿಗೆ ನಂಬಿಕೆಯಿಲ್ಲದಿದ್ದರೆ ಏನು ಮಾಡಬಹುದು ಎನ್ನುವುದದರ ಬಗ್ಗೆ ನಾರಾಯಣ ಹೆಲ್ತ್ ಸಿಟಿಯ (ನಾರಾಯಣ ಹೃದಯಾಲಯ) ವೈದ್ಯರಾದ ಡಾ.ಹೇಮಂತ್ ಎಚ್.ಆರ್ ಅವರು ವಿವರಣೆಯನ್ನು ನೀಡಿದ್ದಾರೆ.

ನಾರಾಯಣ ಹೃದಯಾಲಯದ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಡಾ.ಹೇಮಂತ್
ನಾರಾಯಣ ಹೃದಯಾಲಯದ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರರಾಗಿರುವ ಹೇಮಂತ್ ಅವರು 'ಒನ್ ಇಂಡಿಯಾ ಕನ್ನಡ'ದ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಾ, "ದೇಶದ ವೈದ್ಯಕೀಯ ವಲಯದ ಶೇ. ಅರವತ್ತರಷ್ಟು ಸಿಬ್ಬಂದಿಗಳು ಕನಿಷ್ಠ ಒಂದು ಬಾರಿಯಾದರೂ, ದಾಳಿಗೆ ಅಥವಾ ನಿಂದನೆಗೆ ಒಳಗಾದ ಉದಾಹರಣೆಗಳಿವೆ"ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಅನಾರೋಗ್ಯ ಬಂದರೆ ಅದು ಯಾವುದೇ ಕುಟುಂಬಕ್ಕಾದರೂ ಆರ್ಥಿಕ ಹೊರೆಯೇ
ಕಾಯಿಲೆಯು ಹೇಳಿ ಕೇಳಿ ಬರುವುದಿಲ್ಲ. ಅನಾರೋಗ್ಯ ಬಂದರೆ ಅದು ಯಾವುದೇ ಕುಟುಂಬಕ್ಕಾದರೂ ಆರ್ಥಿಕ ಹೊರೆಯೇ. ಆ ಒತ್ತಡ ಬಂದಾಗ, ದಾಳಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದಕ್ಕೆ ಮುಂದಾಗುತ್ತಾರೆ. ನಮ್ಮ ದೇಶದಲ್ಲಿ ಹೆಲ್ತ್ ಕೇರ್ ಮೇಲೆ ಕೇವಲ ಶೇ. 2.5ರಷ್ಟು ಮಾತ್ರ ಸರಕಾರ ಖರ್ಚು ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳು ಮೂಲ ಸೌಕರ್ಯದ ಮೇಲೆ ತುಂಬಾ ಬಂಡವಾಳ ಹಾಕಿರುವುದರಿಂದ ಚಿಕಿತ್ಸಾ ವೆಚ್ಚವೂ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಎಂದು ಡಾ. ಹೇಮಂತ್ ಸಂವಾದದಲ್ಲಿ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

ನಮ್ಮ ಕಾನೂನಿನಲ್ಲಿ ಐಪಿಸಿ 323 ರೀತಿಯ ಸೆಕ್ಸನ್ ಗಳಿವೆ
ವೈದ್ಯರ ಮೇಲೆ ದಾಳಿ ನಡೆದಾಗ ನಮ್ಮ ಕಾನೂನಿನಲ್ಲಿ ಐಪಿಸಿ 323 ರೀತಿಯ ಸೆಕ್ಸನ್ ಗಳಿವೆ. ಇವೆಲ್ಲವೂ ಜಾಮೀನು ರಹಿತ ಕೇಸುಗಳಾಗಿರುತ್ತವೆ. ಬಹಳಷ್ಟು ರೋಗಿಗಳಿಗೆ ಮತ್ತು ಅವರ ಕಡೆಯವರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಆ ಕ್ಷಣದ ಸಿಟ್ಟಿನಿಂದ ದಾಳಿ ಮಾಡಿದರೆ, ಸುಮ್ಮನೆ ಜೈಲು ಶಿಕ್ಷೆಯಾಗುವುದು ಖಚಿತ. ಆ ಸಮಯದ ಒತ್ತಡದಿಂದ ಈ ರೀತಿ ಆಗುತ್ತಿರುವುದು ಎಂದು ಗೊತ್ತಿರುವ ವಿಚಾರವಾದರೂ, ಸುಮ್ಮನೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಡಾ. ಹೇಮಂತ್ ಅಭಿಪ್ರಾಯ ಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)
Recommended Video

ಕ್ಲಿನಿಕಲ್ ಸಮ್ಮರಿ ಕೊಡಿ ಎಂದು ಆಸ್ಪತ್ರೆಯಲ್ಲಿ ಕೇಳಿದರೆ, ಅದನ್ನು ಕೊಡಲೇ ಬೇಕಾಗುತ್ತದೆ
ವೈದ್ಯರು ನೀಡುವ ಚಿಕಿತ್ಸೆಯ ಮೇಲೆ ನಂಬಿಕೆಯಿಲ್ಲದಿದ್ದರೆ ಸೆಕೆಂಡ್ ಒಪಿನೀಯನ್ ತೆಗೆದುಕೊಳ್ಳಬಹುದು. ಕ್ಲಿನಿಕಲ್ ಸಮ್ಮರಿ ಕೊಡಿ ಎಂದು ಆಸ್ಪತ್ರೆಯಲ್ಲಿ ಕೇಳಿದರೆ, ಅದನ್ನು ಹಾಸ್ಪಿಟಲ್ ನವರು ಕೊಡಲೇ ಬೇಕಾಗುತ್ತದೆ. ಆ ರಿಪೋರ್ಟ್ ಅನ್ನು ತೆಗೆದುಕೊಂಡು ಇನ್ನೊಂದು ಡಾಕ್ಟರ್ ಬಳಿ ಹೋಗಬಹುದು. ವೈದ್ಯರ ಮೇಲೆ ನಂಬಿಕೆಯಿಲ್ಲದಿದ್ದರೆ ವೈದ್ಯರನ್ನು ಬದಲಾಯಿಸುವ ಆಯ್ಕೆಯೂ ರೋಗಿಗೆ ಇರುತ್ತದೆ. ಚಿಕಿತ್ಸೆ ಮುಗಿದಮೇಲೂ ಸುಧಾರಣೆ ಕಂಡು ಬರದಿದ್ದಲ್ಲಿ ರೋಗಿಗೆ ಕನ್ಸೂಮರ್ ಕೋರ್ಟಿಗೆ ಹೋಗುವ ಆಯ್ಕೆಯಿದೆ ಎಂದು ಡಾ.ಹೇಮಂತ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)












Click it and Unblock the Notifications