Year Ender 2024: 2024ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ನಾಯಕರುಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 26: 2024ರ ರಾಜ್ಯ ರಾಜಕಾರಣ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷ ಲೋಕಸಭಾ ಚುನಾವಣೆಗಳ ಜೊತೆ ಜೊತೆಗೆ ರಾಜ್ಯದಲ್ಲಿ ಉಪಚುನಾವಣೆಗಳು ಸಹ ನಡೆದಿದ್ದು, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಸೇರಿದಂತೆ ಹಲವು ಕಾರಣಗಳಿಂದಾಗಿ ಹಲವು ನಾಯಕರು ಈ ವರ್ಷ ರಾಜಕೀಯ ನಿವೃತ್ತಿಯನ್ನ ಘೋಷಿಸಿದ್ದಾರೆ.
ಮಾಜಿ ಸಿಎಂ ವೀರಪ್ಪ ಮೊಯ್ಲಿ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನ ಘೋಷಿಸಿದ್ದಾರೆ. 2024 ರ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ವೀರಪ್ಪ ಮೊಯ್ಲಿ ಅವರು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಿರಲು ತೀರ್ಮಾನಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ಯುವ ನಾಯಕರ ರಕ್ಷಾ ರಾಮಯ್ಯ ಅವರಿಗೆ ನೀಡಿದೆ. ಇದರಿಂದ ವೀರಪ್ಪ ಮೊಯ್ಲಿ ಕೊಂಚ ನಿರಾಸೆಯಲ್ಲಿದ್ದರು. ಇದೀಗ ಅಂತಿಮವಾಗಿ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಸಚಿವ ಕೆ ಎನ್ ರಾಜಣ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರೊಬ್ಬರು ಚುನವಣಾ ರಾಜಕೀಯದಿಂದ ದೂರ ಸರಿದಿದ್ದಾರೆ. ಮಧುಗಿರಿಯ ಕಾಂಗ್ರೆಸ್ ಶಾಸಕ ಕೆ. ಎನ್. ರಾಜಣ್ಣ ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು 91166 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ.ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತೇನೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಸೇರಿದಂತೆ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದರು.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಕೆ. ಎನ್. ರಾಜಣ್ಣ ಚುನಾವಣಾ ರಾಜಕೀಯಕ್ಕೆ ಮಾತ್ರ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ, ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಬೇಕಾದವರನ್ನು ಗೆಲ್ಲಿಸುವುದು, ಬೇಡವಾದವರನ್ನು ಸೋಲಿಸುವ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿಸುತ್ತೇನೆ. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಚಿವ ಕೆ ಎನ್ ರಾಜಣ್ಣ ಅವರು ಸ್ಪಷ್ಟಪಡಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಶ್ರೀನಿವಾಸ್ ಪ್ರಸಾದ್
2024 ಮಾರ್ಚ್ 17ಕ್ಕೆ ಚುನಾವಣಾ ರಾಜಕೀಯ ನಿವೃತ್ತಿಯನ್ನ ವಿ ಶ್ರೀನಿವಾಸ್ ಪ್ರಸಾದ್ ಅವರು ಘೋಷಿಸಿದ್ದರು. ತಮ್ಮ ಸಂಸದ ಸ್ಥಾನದ ಅವಧಿ 2024ರಲ್ಲಿ ಕೊನೆಗೊಂಡ ನಂತರ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧಾರಿಸಿರುವುದಾಗಿ ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದರು. ಇತ್ತೀಚೆಗೆ ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಅವರು ನಿಧನ ಹೊಂದಿದ್ದಾರೆ.
ಮಾಜಿ ಸಿಎಂ ಸದಾನಂದ ಗೌಡ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. 2024 ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೈಕಮಾಂಡ್ ಸೂಚನೆಯ ಮೇರೆಗೆ ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನ ಘೋಷಿಸಿದ್ದರೆ.
'ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ರಾಜ್ಯ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.
ರಮೇಶ್ ಕುಮಾರ್
2023ರ ವಿಧಾನಸಭೆ ಸೋಲು ಅನುಭವಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿನಾಗುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ರಾಜಕಾರಣದಲ್ಲಿ ಮೌಲ್ಯಗಳು ಉಳಿದಿಲ್ಲ. ರಾಜಕೀಯ ಜೀವನದಲ್ಲಿ ಇಷ್ಟು ವರ್ಷ ನ್ಯಾಯಯುತವಾಗಿ ಬದುಕಿದ್ದೇನೆ. ಪಕ್ಷದ ಕೆಲವರು ಹಣಕ್ಕೆ ತಲೆ ಮಾರಿಕೊಂಡು ನನೆಗೆ ಮೋಸ ಮಾಡಿ ಸೋಲಿಸಿದರು ಎಂದು ಬೇಸರ ಹೊರ ಹಾಕುವ ಮೂಲಕ ರಮೇಶ್ ಕುಮಾರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.












Click it and Unblock the Notifications