Karnataka Dam Water Level: ಕಬಿನಿ, ಹಾರಂಗಿ, ಹೇಮಾವತಿ ಡ್ಯಾಂಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ, ಪ್ರವಾಹ ಎಚ್ಚರಿಕೆ
ಬೆಂಗಳೂರು, ಜೂನ್ 25: ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ವ್ಯಾಪಕ ಮಳೆ ಮುಂದುವರಿದಿದೆ. ಮುಂಗಾರು ಮಳೆ ಅಬ್ಬರ ಕಾರಣಕ್ಕೆ ಕೃಷ್ಣ ರಾಜ ಸಾಗರ (KRS) ಒಳಹರಿವು ಮಾತ್ರವಲ್ಲದೇ ಅದರ ಉಪನದಿಗಳಾದ ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಲ್ಲಿ ಒಳಹರಿವು ತೀವ್ರ ರೂಪದಲ್ಲಿ ಹೆಚ್ಚಾಗಿದ್ದು, ಪರಿಣಾಮ ಹೊರ ಹರಿವು ಸಹ ಏರಿಕೆ ಆಗಿದೆ. ಹತ್ತಾರು ಸಾವಿರಾರು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಆಯಾ ನದಿಗಳ ಜಲಾನಯನ ಪ್ರದೇಶಗಳ ನಿವಾಸಿಗಳಿಗೆ ಪ್ರವಾಹ ಎಚ್ಚರಿಕೆ ಕೊಡಲಾಗಿದೆ.
ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಜೋರು ಮಳೆ ಆದ ಕಾರಣದಿಂದಾಗಿ KRS ಒಳಹರಿವು ಹೆಚ್ಚಳವಾಗಿದೆ. ಇದರೊಂದಿಗೆ ಕಬಿನಿ ಜಲಾಶಯ ತುಂಬಿ ತುಳುಕುತ್ತಿದೆ. ಕಬಿನಿ ನದಿಗೆ ಅಡ್ಡಲಾಗಿ ಮೈಸೂರಿನ ಹೆಗ್ಗಡದೇವನ ಕೋಟೆ (ಹೆಚ್‌ಡಿ ಕೋಟೆ) ತಾಲೂಕಿನ ವ್ಯಾಪ್ತಿಯಲ್ಲಿ ಇರುವ ಕಬಿನಿ ಡ್ಯಾಂನಿಂದ ಇಂದು ಬುಧವಾರ 12000ಕ್ಕೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ.

KRSನಿಂದ 50,000 ಕ್ಯೂಸೆಕ್ ನೀರು ಹೊರಕ್ಕೆ
ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಇಂದು 50,000 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ನೆನ್ನೆ ಮಂಗಳವಾರದಿಂದಲೂ ಅಪಾರ ಪ್ರಮಾಣದಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದ್ದು, ಸಾವಿರಾರು ಕ್ಯುಸೆಕ್ ನೀರು ನದಿಗೆ ಬಿಡುಗಡೆ ಮಾಡಿದ್ದು, ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಸರ್ಕಾರ ಸುರಕ್ಷಿತ ಪ್ರದೇಶಗಳಲ್ಲಿರುವಂತೆ ಸೂಚನೆ ನೀಡಿದೆ.
ಹಾರಂಗಿ, ಹೇಮಾವತಿ ಡ್ಯಾಂನಿಂದ ಅಪಾರ ನೀರು ಬಿಡುಗಡೆ
ಕೊಡಗು ಜಿಲ್ಲೆಯ ಹಗದೂರು ಗ್ರಾಮ ವ್ಯಾಪ್ತಿಯಲ್ಲಿ ಹಾರಂಗಿ ನದಿಗೆ ಅಡ್ಡಲಾಗಿ ಹಾರಂಗಿ ಜಲಾಶಯ ನಿರ್ಮಿಸಲಾಗಿದೆ. ಇದು ಸಾಕಷ್ಟು ಹೆಕ್ಟರ್ ಪ್ರದೇಶಗಳಿಗೆ ಹಾಗೂ ಕುಡಿಯಲು ನೀರು ಒದಗಿಸುತ್ತದೆ. ಈ ಡ್ಯಾಂನಿಂದ ಬುಧವಾರ 10000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಕೊಡಗು, ಸೋಮವಾರಪೇಟೆ, ಶನಿವಾರ ಸಂತೆ, ಬಾಗಮಂಡಲ, ತಲಕಾವೇರಿಯಲ್ಲಿ ಉತ್ತಮ ಮಳೆ ಆಗಿದ್ದರಿಂದ ಹಾರಂಗಿ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಒಳಹರಿವು ಹೆಚ್ಚಾಗಿದ್ದು, ಅಧಿಕ ಪ್ರಮಾಣದಲ್ಲಿ ನೀರನ್ನು ಹೊರ ಬೀಡಲಾಗುತ್ತಿದೆ.
ಇನ್ನೂ ಕಾವೇರಿ ನದಿಯ ಮತ್ತೊಂದು ಉಪನದಿಯಾಗಿರುವ ಹೇಮಾವತಿ ನದಿ ಹಾಗೂ ಜಲಾಶಯದಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಹಾಸನ ಜಿಲ್ಲೆಯ ಗೋರೂರು ಭಾಗದಲ್ಲಿ ಹೇಮಾವತಿ ಜಲಾಶಯ ನಿರ್ಮಿಸಲಾಗಿದೆ. ಸಕಲೇಶಪುರ, ಹಾಸನ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಆಗಿದೆ. ಹೀಗಾಗಿ ಹೇಮಾವತಿ ಡ್ಯಾಂನಲ್ಲಿ ಒಳಹರಿವು ಏರಿಕೆ ಆಗಿದ್ದು. ಅಲ್ಲಿಂದ ಇಂದು 15000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಪ್ರವಾಹ ಎಚ್ಚರಿಕೆ: ಮಳೆ ಮುಂದುವರಿಕೆ
ವಿವಿಧ ಡ್ಯಾಂಗಳಿಂದ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಪ್ರವಾಹ ಸ್ಥಿತಿ ಉಂಟಾಗುವ ನಿರೀಕ್ಷೆ ಇದೆ. ಹೀಗಾಗಿ ಈ ಮೇಲಿನ ಎಲ್ಲ ಡ್ಯಾಂಗಳ ಕೆಳಗಿನ ಭಾಗದ ಗ್ರಾಮಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳದಲ್ಲಿರುವಂತೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ನೀಡಿದೆ. ಪಶ್ಚಿಮ ಘಟ್ಟಗಳು, ಮೈಸೂರು, ಮಂಡ್ಯ ಇತರ ಭಾಗಗಳಲ್ಲಿ ಉತ್ತಮ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂನೆ ನೀಡಿದೆ.












Click it and Unblock the Notifications