ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಹಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಈಗ ಮತ್ತೆ ಚುರುಕು ಪಡೆದುಕೊಂಡಿದೆ. ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಕರ್ನಾಟಕ ರಾಜ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಂಗಳವಾರದ ದೈನಂದಿನ ವರದಿಯ ಪ್ರಕಾರ, ಸಾಮಾನ್ಯ ಮಾನ್ಸೂನ್ ಚಟುವಟಿಕೆ ಮುಂದುವರೆದಿದ್ದು, ರಾಜ್ಯದಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ.
ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ನಾವೂರಿನಲ್ಲಿ ಕ್ರಮವಾಗಿ 201 ಮತ್ತು 173.5 ಮಿ.ಮೀ ಮಳೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ತೆಕ್ಕಾರು ಭಾಗದಲ್ಲಿ 168.5 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ರಾಜ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಮುಂದಿನ 24 ಗಂಟೆಗಳ ಮಳೆ ನಕ್ಷೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬಳಿ ಹೆಚ್ಚು ಮಳೆಯಾಗುವ ಸಾಧ್ಯತೆ ಬಗ್ಗೆ ತಿಳಿಸಿದೆ.

ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ ಐಎಂಡಿ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ. 64.5 ಮಿಲಿ ಮೀಟರ್ ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದಾಗ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡುತ್ತದೆ.
ಬೆಂಗಳೂರಿನಲ್ಲಿ ಮಂಗಳವಾರ ಮೋಡ ಕವಿದ ಮುಂಜಾನೆ, ತುಂತುರು ಮಳೆಯಾಗಿತ್ತು. ಬುಧವಾರ ಕೂಡ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಬೆಂಗಳೂರು ನಿವಾಸಿಗಳು ಸಂಜೆ ಮತ್ತು ಮುಂಜಾನೆ ಚಳಿಯ ವಾತಾವರಣವನ್ನು ಅನುಭವಿಸಿದರು.

ಬಾಗಲಕೋಟೆಯಲ್ಲಿ ಶೇಕಡ 100 ರಷ್ಟು ಆರ್ದ್ರತೆ
ಮಂಗಳವಾರ ಕೊಡಗು ಜಿಲ್ಲೆಯಲ್ಲಿ ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 18.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ರಾಯಚೂರಿನಲ್ಲಿ ಸರಾಸರಿ ಗರಿಷ್ಠ ತಾಪಮಾನ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಧಾರವಾಡದಲ್ಲಿ 28 ಮಿ.ಮೀ ಮಳೆಯಾಗಿದ್ದು, ಬಾಗಲಕೋಟೆಯಲ್ಲಿ ಶೇಕಡ 100ರಷ್ಟು ಆರ್ದ್ರತೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಮಾತ್ರವಲ್ಲದೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕರಾವಳಿ ಜಿಲ್ಲೆಗಳ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸು ಪಡೆದುಕೊಂಡಿದೆ.

ಗುಂಡಿ ಗುರುತಿಸಲು ಫಿಕ್ಸ್ ಮೈ ಸ್ಟ್ರೀಟ್ ಆಪ್
ಸತತ ಮಳೆಯಿಂದಾಗಿ ಬೆಂಗಳೂರಿನಲ್ಲಿ ಗುಂಡಿಗಳ ಹಾವಳಿ ಮತ್ತೆ ಕಾಣಿಸಿಕೊಂಡಿದೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಜಿಯೋ ಮ್ಯಾಪ್ ಮತ್ತು ಫಿಕ್ಸ್ ಮೈ ಸ್ಟ್ರೀಟ್ ಆಪ್ ಮೂಲಕ ಗುಂಡಿಗಳನ್ನು ಗುರುತಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ 11,000 ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದೆ. ನಗರದಲ್ಲಿ ಗುಂಡಿಗಳ ಕಾಮಗಾರಿ ಆರಂಭಿಸಲು ಮಳೆ ನಿಲ್ಲಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಮಳೆ ನಡುವೆ ಬಿಬಿಎಂಪಿಯು ನಗರದಾದ್ಯಂತ 1,090 ಗುಂಡಿಗಳನ್ನು ಗುರುತಿಸಿ 643 ಗುಂಡಿಗಳನ್ನು ಮುಚ್ಚಿದೆ.











Click it and Unblock the Notifications