ಬೆಂಗಳೂರು : 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 19 : ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ದಾವಣಗೆರೆಯಲ್ಲಿ ಭಾನುವಾರ ಸುರಿದ ಮಳೆಗೆ ಒಬ್ಬರು ಸಾವನ್ನಪ್ಪಿದ್ದಾರೆ.
ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯೂ ಮಳೆ ಸುರಿದಿದೆ.
ತಮಿಳುನಾಡಿನಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯಾಗಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ ಎಂದು ಮುನ್ಸೂಚನೆ ಹೇಳಿದೆ.

ಭಾನುವಾರದ ಮಳೆ : ಮೈಸೂರು, ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಮಳೆ ಆರ್ಭಟಿಸಿದೆ. ದಾವಣಗೆರೆಯಲ್ಲಿ ಸಂಜೆ ಭಾರಿ ಮಳೆಯಾಗಿದ್ದು, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತವಾಗಿತ್ತು.
ದಾವಣಗೆರೆಯಲ್ಲಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ದೇವರಾಜ ಅರಸು ಬಡಾವಣೆಯಲ್ಲಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೈಸೂರು, ಕೊಡಗು ಜಿಲ್ಲೆಯಲ್ಲಿಯೂ ಭಾನುವಾರ ಅರ್ಧ ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ವಿರಾಜಪೇಟೆ ತಾಲೂಕಿನ ತೋರಾದಲ್ಲಿ ಕೊಚ್ಚಿಯಿಂದ ಗುಡ್ಡದ ರಾಶಿಯಿಂದ ಶಂಕರ್ ಎನ್ನುವವರ ಮೃತದೇಹವನ್ನು ಹೊರತೆಗೆಯಲಾಗಿದೆ.
ಬಾಗಲಕೋಟೆಯ ಚಿಕ್ಕಪಡಸಲಗಿಯಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಅಥಣಿಯ ದರೂರು-ಹಳ್ಯಾಳ ಸೇತುವೆ ಬಿರುಕು ಬಿಟ್ಟಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.












Click it and Unblock the Notifications