ಮುಂಗಾರು ಮಳೆ ಆಗಮನ, ರಾಜ್ಯಕ್ಕಿಲ್ಲ ಆತಂಕ
ಬೆಂಗಳೂರು, ಜೂ. 04: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ನಿರೀಕ್ಷೆಯಂತೆ ಜೂನ್ 9 ರಂದು ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶ ಮಾಡಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಡಿಕೆ ಪ್ರಕಾರ ಮುಂಗಾರು ಜೂ.1ಕ್ಕೆ ಕೇರಳಕ್ಕೆ ಪ್ರವೇಶವಾಗಿ, ಜೂ.5ಕ್ಕೆ ಕರ್ನಾಟಕ ಪ್ರವೇಶಿಸಬೇಕಿತ್ತು. ಕೊಪ್ಪಳ, ಮಂಡ್ಯ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಹಾವೇರಿ, ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಮಳೆಯಾಗಿದೆ. ಬಯಲು ಸೀಮೆ ಭಾಗದಲ್ಲೂ ಮಳೆಯಾಗುತ್ತಿರುವುದು ಕೃಷಿ ಕೆಲಸಕ್ಕೆ ವೇಗ ನೀಡಿದೆ.[ಬೆಂಗಳೂರು ಮಳೆಯ ಭಾರೀ ಚಿತ್ರಗಳು]
ಲಕ್ಷದ್ವೀಪ ಭಾಗದಲ್ಲಿ ಉಂಟಾಗಿರುವ ವಾಯುಭಾರ ವ್ಯತ್ಯಾಸದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಗರದಲ್ಲಿ ಬುಧವಾರ 4.6 ಮಿ.ಮೀ. ಮಳೆಯಾಗಿದೆ. ಸಂಜೆ ವೇಳೆ ಹಲವೆಡೆ ಧಾರಾಕಾರ ಮಳೆ ಸುರಿದು ಕೆಲ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತು.

ಕಾರಹುಣ್ಣಿಮೆ ಸಂಭ್ರಮ ಕಿತ್ತುಕೊಂಡ ಮಳೆ
ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಏಕಾಏಕಿ ಮಳೆ ಆರಂಭವಾಗಿದೆ. ಸತತ ನಾಲ್ಕು ತಾಸು ಸುರಿದ ಮಳೆಯಿಂದಾಗಿ ಕುಂದಗೋಳ ಹಾಗೂ ಸಂಶಿ ಹೋಬಳಿಯ ಹೊಸಳ್ಳಿ, ಯರೇಬೂದಿಹಾಳ, ಕೊಡ್ಲಿವಾಡ, ಹಿರೇಗುಂಜಾಳ, ಗುಡಗೇರಿ, ಹಿರೇನರ್ತಿ, ಚಿಕ್ಕನರ್ತಿ, ಗುಡೇನಕಟ್ಟಿ, ಕಮಡೊಳ್ಳಿ ಭಾಗಗಳು ಜಲಾವೃತವಾದವು. ಒಂದೇ ಮಳೆಗೆ ರಸ್ತೆಗಳು ಕೊಚ್ಚಿಹೋಗಿದ್ದು ಜನರು ಸಂಕಷ್ಟ ಪಡುವಂತೆ ಆಗಿದೆ.

ರೈತರ ಮೊಗದಲ್ಲಿ ಸಂತಸ
ಮುಂಗಾರು ಮಾರುತಗಳಿ ಈ ಬಾರಿ ದುರ್ಬಲವಾಗಿದೆ ಎಂದೇ ಹೇಳಲಾಗಿತ್ತು. ಈಗ ಕೊಂಚ ವಿಳಂಬವಾಗಿಯಾದರೂ ಮುಂಗಾರು ಆಗಮಿಸಯತ್ತಿರುವುದು ರೈತರ ಮೂಖದಲ್ಲಿ ಮಂದಹಾಸ ಮೂಡಿಸಿದೆ.

ಸಂಕಷ್ಟ ಎದುರಿಸಲು ಕೇಂದ್ರ ಸಿದ್ಧ
ಮಳೆ ಅಭಾವದಿಂದ ಉಂಟಾಗುವ ಆಹಾರ ಉತ್ಪಾದನೆಯ ಕೊರತೆ ಹಾಗೂ ನಂತರ ಎದುರಾಗಬಹುದಾದ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. 'ರಾಜ್ಯಗಳಿಂದ ಆಹಾರ ಉತ್ಪಾದನೆಯ ಮಾಹಿತಿಯನ್ನು ತರಿಸಿಕೊಳ್ಳಲಾಗುತ್ತಿದೆ. ಮಳೆ ಕೊರತೆ ಎದುರಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ನಡೆಸಿದೆ ಎಂದು ಕೃಷಿ ಸಚಿವ ರಾಧಾ ಮೋಹನ ಸಿಂಗ್ ತಿಳಿಸಿದ್ದಾರೆ.

ಕರ್ನಾಟಕಕ್ಕಿಲ್ಲ ಮಳೆ ಕೊರತೆ ಆತಂಕ
ವಾಡಿಕೆಗಿಂತ ಕಡಿಮೆಮ ಮಳೆಯಾಗುತ್ತದೆ ಎಂದು ಹೇಳಲಾಗುದ್ದರೂ ರಾಜ್ಯದಲ್ಲಿ ಮಳೆ ಕೊರತೆಯಾಗುವುದಿಲ್ಲ. ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಂತಿರುವ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ.92ರಷ್ಟು ಮಳೆಯಾಗುತ್ತದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications