Heavy Rain: ರಾಜ್ಯದ ಈ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ; ಜಿಲ್ಲಾಡಳಿತಗಳಿಂದ ಮುಂಜಾಗ್ರತಾ ಕ್ರಮ
ರಾಜ್ಯದಲ್ಲಿ ಹಿಂಗಾರು ಅಬ್ಬರ ಜೋರಾಗುತ್ತಿದ್ದು ಮುಂದಿನ ಐದು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಧಾರವಾಡ ಜಿಲ್ಲೆಯಲ್ಲಿ ಕೂಡ ಭಾರಿ ಮಳೆಯ ಮುನ್ಸೂಚನೆ ಇದ್ದು, ಹೆಚ್ಚಿನ ಹಾನಿಯನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬುಧವಾರದವರೆಗೂ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದ್ದು, ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳ ಜಲಾನಯನ ಪ್ರದೇಶಗಳಲ್ಲಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ. ಅಧಿಕಾರಿಗಳಿ ಸೂಚನೆ ಕೊಟ್ಟಿದ್ದಾರೆ. ಸೋಮವಾರ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ ಅವರು, ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ತಂಡದಿಂದ ಗ್ರಾಮಗಳಲ್ಲಿ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.

ಹವಾಮಾನ ವೈಪರೀತ್ಯದಲ್ಲಿ ಪ್ರಾಣಹಾನಿಯಾಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಎರಡು ಬೋಟ್‌ಗಳು, 50 ಲೈಫ್ ಜಾಕೆಟ್‌ಗಳು, 60 ಲೈಫ್‌ಗಾರ್ಡ್‌ಗಳು, 150 ರೈನ್‌ಕೋಟ್‌ಗಳು ಒಳಗೊಂಡಂತೆ ಈಗಾಗಲೇ ಐದು ರಕ್ಷಣಾ ತಂಡಗಳನ್ನು ಸಿದ್ಧವಾಗಿ ಇಡಲಾಗಿದೆ.
ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 180ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಸಮೀಕ್ಷೆ ಆಧರಿಸಿ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 5,525 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಇಂದು, ನಾಳೆ ಭಾರಿ ಮಳೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ.
ಅಕ್ಟೋಬರ್ 22ರವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಮಾನಾ ಇಲಾಖೆ ವರದಿಯಲ್ಲಿ ತಿಳಿಸಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಲಿದ್ದು, ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 18ರವರೆಗೂ ವ್ಯಾಪಕ ಮಳೆಯ ಮುನ್ಸೂಚನೆ ಇದ್ದು, ಬಳಿಕ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications