Breaking: ಮಂಗಳವಾರ ಕರಾವಳಿ ಕರ್ನಾಟಕಕ್ಕೆ ಅತೀ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು ಸೆಪ್ಟಂಬರ್ 12: ಕರ್ನಾಟಕದಲ್ಲಿ ಕರಾವಳಿ ಹೊರತು ಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಮುಂಗಾರಿನ ಅಬ್ಬರ ತಗ್ಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ (ಸೆ.15) ಸಾಧಾರಣದಿಂದ ಭಾರಿ ಮಳೆ ಮುಂದುವರಿಯಲಿದೆ. ಈ ಪೈಕಿ ಮಂಗಳವಾರ ಮಾತ್ರ ಕರಾವಳಿಗೆ ಭಾರೀಯಿಂದ ಅತೀ ಭಾರಿ ಮಳೆ ಆಗುವ ಸಂಭವ ಇದ್ದು, ಮೂರು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ನಂತರ ಎರಡು ದಿನ ಮಳೆ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಒಳನಾಡು ಭಾಗದ ಹಲವು ಕಡೆಗಳಲ್ಲಿ ಮಳೆ ಇಳಿಕೆ ಆಗಿದ್ದು, ಮೋಡ ಕವಿದ ವಾತಾವರಣವೇ ಮುಂದುವರಿದಿದೆ. ಮಂಗಳವಾರ ಒಂದು ದಿನ ಮಾತ್ರ ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ ಹಾಗೂ ಚಿಕ್ಕಬಳ್ಳಾಪುರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಸಾಧಾರಣದಿಂದ ಭಾರಿ ಮಳೆ ಮುಂದುವರಿಯಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಮಂಗಳವಾರ ಮಾತ್ರ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿಯಲ್ಲಿ ಬಿರುಗಾಳಿ ವೇಗ ಅಧಿಕ
ಹೆಚ್ಚು ಮಳೆ ಬೀಳುವ ಕರಾವಳಿ ತೀರದಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 45ರಿಂದ 55ಕಿ.ಮೀ.ವರೆಗೆ ಬೀಸುವ ಸಾಧ್ಯತೆ. ಕೆಲವೊಮ್ಮೆ ಇದರ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಉತ್ತರ ಕನ್ನಡದ ಕ್ಯಾಸಲ್ ರಾಕ್ ನಲ್ಲಿ ಅಧಿಕ 17ಸೆಂಟಿ ಮೀಟರ್ ಮಳೆ ಆಗಿದೆ. ಉಳಿದಂತೆ ಕುಮಟಾ, ಕೊಟ್ಟಿಗೆಹಾರದಲ್ಲಿ ತಲಾ 15ಸೆಂ.ಮೀ., ಹೊನ್ನಾವರ, ಭಾಗಮಂಡಲ ತಲಾ 9ಸೆಂ.ಮೀ, ಅಂಕೋಲಾ 8ಸೆಂ.ಮೀ. ಮಳೆ ಬಿದ್ದಿದೆ.
ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಒಮ್ಮೊಮ್ಮೆ ಬಲವಾಗಿ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ 28 ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications