Karnataka Heat Waves: ಬೆಂಗಳೂರು ಸೇರಿ ಕರ್ನಾಟಕಕ್ಕೆ 'ಶಾಖದ ಅಲೆ' ಮುನ್ಸೂಚನೆ: ಹೇಗಿರಲಿವೆ ಮುಂದಿನ ದಿನಗಳು?
ಬೆಂಗಳೂರು, ಫೆಬ್ರವರಿ 22: ಕರ್ನಾಟಕ ರಾಜ್ಯದಲ್ಲಿ ಮೈಸುಡುವಷ್ಟರ ಮಟ್ಟಿಗೆ ಬಿಸಿಲು ದಾಖಲಾಗುತ್ತಿದೆ. ಫೆಬ್ರವರಿ ಆರಂಭದಿಂದಲೇ ತಾಪಮಾನ ಏರುಗತಿಯಲ್ಲಿ ಸಾಗಿದೆ. ಮುಂದಿನ ದಿನಗಳಲ್ಲಿ ಸಹ ಬೆಂಗಳೂರು ಸೇರಿದಂತೆ ಕರ್ನಾಟಕ ಜನರು ವ್ಯಾಪಕ ಬಿಸಿಲಿನ ಅಲೆ ನೋಡಲಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದ್ದು, ಬಹುತೇಕ ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಲಿದೆ. ಕೆಲವು ದಿನಗಳಲ್ಲಿ ವಾಡಿಕೆ ತಾಪಮಾನಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ಕಂಡು ಬರುತ್ತಿದೆ. ಬೆಂಗಳೂರಿನಲ್ಲೂ ಈ ಬಾರಿ ಫೆಬ್ರವರಿಯಲ್ಲೇ ಹೆಚ್ಚು ಬಿಸಿಲು ಕಂಡು ಬಂದಿದೆ. ನೀರಿನ ಹಾಹಾಕಾರ ಸಹಿತ ಶುರುವಾಗಿದೆ.

ಇಂದು ಅತ್ಯಧಿಕ ತಾಪಮಾನ ದಾಖಲು
ಬೇಸಿಗೆ ಆರಂಭದಲ್ಲೇ ಈ ರೀತಿ ಬಿರು ಬಿಸಿಲು ಬಿದ್ದರೆ, ಮುಂದಿನ ಜೂನ್ ವರೆಗೆ ಜನರ ಸ್ಥಿತಿ ಏನು? ಎಂಬ ಆತಂಕ ಸಹ ಎದುರಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಬೆಳಗ್ಗೆ ಚಳಿ ಪ್ರಮಾಣವು ಇಲ್ಲದಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲಿನ ಶಾಖಾ ಕಂಡು ಬರುತ್ತಿದೆ. ಇದರಿಂದ ಜನರು ತಂಪುಪಾನೀಯ, ಐಸ್‌ಕ್ರೀಂ ನಂತಹ ಉತ್ಪನ್ನಗಳತ್ತ ವಾಲುತ್ತಿದ್ದಾರೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಧಿಕ ತಾಪಮಾನ ಕಂಡು ಬಂದರೆ, ಇದಕ್ಕಿಂತಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೋ ಬಿಸಿ ಗಾಳಿಯ (Heat Wave) ಅನುಭವವಾಗುತ್ತಿದೆ. ಅಂತಜರ್ಲವು ಕಡಿಮೆಯಾಗಿದ್ದು, ನದಿಗಳಲ್ಲಿ ನೀರೇ ಇಲ್ಲದಾಗಿದೆ. ಎಲ್ಲೆಲ್ಲೂ ಬಯಲು, ಬಿಸಿ ಗಾಳಿ ಬೀಸುತ್ತಿದೆ.
ಉತ್ತರ ಕರ್ನಾಟಕದಲ್ಲಿ ಒಣ ಹವೆ-ಬಿಸಿ ಅಲೆ
ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿಪರೀತ ಬಿಸಿಲು (ತಾಪಮಾನ) ದಾಖಲಾಗುತ್ತಿದೆ. ಬಾಗಲಕೋಟೆ, ರಾಯಚೂರು, ಕಲಬುರಗಿಯಲ್ಲಿ ಗುರುವಾರ ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿದೆ.

ಇದೇ ರೀತಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಮಂಡ್ಯ, ತಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಹ ಸುಡುಬಿಸಿಲು ದಾಖಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಭಾಗದಲ್ಲಿ ಒಂಚೂರು ಸಾಧಾರಣ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕಾವು
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ನಗರ 32.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕರ್ನಾಟಕದ ಬಾಗಲಕೋಟೆ, ರಾಯಚೂರು, ಕಲಬುರಗಿಯಲ್ಲಿ ಗುರುವಾರ ರಾಜ್ಯದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚು ಬಿಸಿಲು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದೇ ವಾತವರಣ ಮುಂದುವರಿಯಲಿದೆ.
ಆರೋಗ್ಯ ಜಾಗೃತಿ ಅಗತ್ಯ
ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ತಂಪು ಪಾನೀಯ, ಎಳನೀರು, ಐಸ್‌ಕ್ರೀಂ ಸವಿಯುತ್ತಿದ್ದಾರೆ. ಇದು ಬೇಸಿಗೆ (ಸೀಸನ್) ಆಗಿರುವ ಕಾರಣ ಅವುಗಳ ಬೆಲೆಗಳು ಹೆಚ್ಚಾಗಿವೆ. ಕೆಲವರು ತೀವ್ರ ಬಿಸಿಲಿನಿಂದ ಅನಾರೋಗ್ಯಕ್ಕೆ ತುತ್ತಾಗುವ ಸಂಭವವು ಇರುತ್ತದೆ. ಈ ವೇಳೆ ಜಾಗೃತಿ ವಹಿಸುವುದು, ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು ಅಗತ್ಯವಾಗಿರುತ್ತದೆ.












Click it and Unblock the Notifications