ಕರ್ನಾಟಕವನ್ನು ತಲ್ಲಣಿಸುವಂತೆ ಮಾಡಿರುವ ಮರ್ಯಾದಾ ಹತ್ಯೆಗಳು

By: ಬಿ.ಎಂ. ಲವಕುಮಾರ್, ಮೈಸೂರು
Subscribe to Oneindia Kannada

ಎಲ್ಲೋ ದೂರದಲ್ಲಿ ಉತ್ತರ ಭಾರತದ ಭಾಗಗಳಲ್ಲಿ ಕೇಳಿ ಬರುತ್ತಿದ್ದ ಮರ್ಯಾದಾ ಹತ್ಯೆ ಪ್ರಕರಣಗಳು ಇದೀಗ ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿರುವುದು ಮಾತ್ರವಲ್ಲ, ಜನರನ್ನು ಬೆಚ್ಚಬೀಳಿಸಿವೆ.

ಇತ್ತೀಚೆಗಿನ ವರ್ಷಗಳಲ್ಲಿ ಹಳೆ ಮೈಸೂರು ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಮರ್ಯಾದಾ ಹತ್ಯೆಗಳು ಬೆಳಕಿಗೆ ಬಂದಿವೆ. ಅದರಲ್ಲೂ ಏಪ್ರಿಲ್ ಒಂದೇ ತಿಂಗಳಲ್ಲಿ ಎರಡು ಪ್ರಕರಣ ನಡೆದಿರುವುದು ಜನತೆಯನ್ನು ಕಂಗೆಡಿಸಿದೆ.

ಜಾತಿ, ಧರ್ಮದ ವಿಷ ವರ್ತುಲದಲ್ಲಿ ಸಿಕ್ಕಿ ತೊಳಲಾಡುತ್ತಿರುವ ಕೆಲವರು ಮಾನ ಮರ್ಯಾದೆ ಹೆಸರಿನಲ್ಲಿ ಮಾನಗೇಡಿ ಕೃತ್ಯಕ್ಕೆ ಮುಂದಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

Heart wrenching honor killings in Karnataka

ಹೆತ್ತು ಹೊತ್ತು ಸಾಕಿದ ಮಕ್ಕಳು ನಾವು ಅಂದುಕೊಂಡಂತೆ ಬದುಕಬೇಕು ಎಂಬುದು ಪೋಷಕರ ಬಯಕೆ. ಆದರೆ ಕೆಲವು ಮಕ್ಕಳು ತಮ್ಮ ಇಷ್ಟದಂತೆ ಬದುಕಲು ಮುಂದಾಗುತ್ತಾರೆ. ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಹೆಣ್ಣು ಮಕ್ಕಳು ಯಾವುದೋ ಒಂದು ಕಾರಣದಿಂದಾಗಿ ಪ್ರೀತಿ ಪ್ರೇಮದ ಸೆಳೆತದಲ್ಲಿ ಸಿಕ್ಕಿ ಬೀಳುತ್ತಾರೆ. ಪ್ರೀತಿ ಜಾತಿ ನೋಡಿ ಹುಟ್ಟುವುದಿಲ್ಲ. ಪ್ರೀತಿ ಹುಟ್ಟಿ ಪ್ರೇಮಿಗಳಾದ ಮೇಲೆಯೇ ಜಾತಿ ನೆನಪಾಗುವುದು.

ಇಷ್ಟಕ್ಕೂ ಮನುಷ್ಯ ಕೀಳಾಗುವುದು ಜಾತಿಯಿಂದಲ್ಲ, ನಡೆನುಡಿಯಿಂದ ಎಂಬುದು ಈಗಾಗಲೇ ಮರ್ಯಾದಾ ಹತ್ಯೆಗಳಿಂದ ಸಾಬೀತಾಗಿದೆ. ಮಗಳನ್ನು ಕೊಂದು ಜೈಲು ಸೇರಿದ ತಕ್ಷಣ ತಮ್ಮ ಜಾತಿಯ ಮರ್ಯಾದೆ ಉಳಿಯುತ್ತದೆಯಾ? ಇಂತಹ ಚಿಕ್ಕ ಆಲೋಚನೆಯೂ ಮಾಡದೆ ಇರುವುದರಿಂದಲೇ ಮತ್ತೆ ಮತ್ತೆ ಪ್ರಕರಣಗಳು ನಡೆಯುತ್ತಲೇ ಇವೆ.

Heart wrenching honor killings in Karnataka

ರಾಜ್ಯದಲ್ಲಿ ಇದುವರೆಗೆ ಸುಮಾರು 11 ಪ್ರಕರಣ ನಡೆದಿದ್ದು 14 ಮಂದಿ ಜೀವತೆತ್ತಿದ್ದಾರೆ. ಬೆಳಕಿಗೆ ಬಾರದೆ ಅದೆಷ್ಟು ಪ್ರಕರಣಗಳು ಮುಚ್ಚಿ ಹೋಗಿವೆಯೋ ಗೊತ್ತಿಲ್ಲ. ಅಚ್ಚರಿಯ ಸಂಗತಿ ಏನೆಂದರೆ, ಕಳೆದೊಂದು ದಶಕದ ಈಚೆಗೆ ಲೆಕ್ಕಹಾಕಿದರೆ ಕೇವಲ ಐದು ವರ್ಷಗಳಲ್ಲಿ 14 ಮಂದಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದಾರೆ ಎಂದರೆ ನಂಬದೇ ವಿಧಿಯಿಲ್ಲ.

ಮರ್ಯಾದಾ ಹತ್ಯೆಗಳಲ್ಲಿ ಬಲಿಯಾದವರ ಪೈಕಿ 8 ಮಹಿಳೆಯರು, ನಾಲ್ಕು ತಿಂಗಳ ಮಗು, 15 ವರ್ಷದ ಇಬ್ಬರು ಬಾಲಕಿಯರು. ಉಳಿದಂತೆ ಪುರುಷರು ಸೇರಿದ್ದಾರೆ. [ಮೋನಿಕಾ ಹತ್ಯೆ : ಗೃಹ ಸಚಿವರಿಗೆ ಮಹಿಳಾ ಆಯೋಗ ಪತ್ರ]

Heart wrenching honor killings in Karnataka

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಮರ್ಯಾದಾ ಹತ್ಯೆಗಳು

* 2011ರ ಫೆ.26ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತಮ್ಮಸಂದ್ರ ಗ್ರಾಮದಲ್ಲಿ ಕೆ.ಆರ್. ದೀಪಿಕಾ ಮತ್ತು ನಾಲ್ಕು ತಿಂಗಳ ಹಸುಗೂಸಿನ ಹತ್ಯೆ ಮಾಡಲಾಗಿತ್ತು.
* 2011ರ ನ.6ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸುವರ್ಣ ಎಂಬ ಯುವತಿಯ ಹತ್ಯೆ ನಡೆಯಿತು.
* 2012ರ ಮಾ.13ರಂದು ಮೈಸೂರು ಸಮೀಪದ ಆಲನಹಳ್ಳಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ಸ್ಮೃತಿ (28)ಯ ಹತ್ಯೆಯಾಯಿತು.
* 2012ರ ಜು.2ರಂದು ಹಾಸನದಲ್ಲಿ 14 ವರ್ಷದ ಮುಸ್ಲಿಂ ಬಾಲಕಿಯ ಹತ್ಯೆ ನಡೆದಿತ್ತು.
* 2012ರ ಸೆ.6ರಂದು ಬೆಂಗಳೂರು ಸಮೀಪದ ಆನೇಕಲ್‌ನಲ್ಲಿ ನವೀನ್ ಕುಮಾರ್ (23)ನನ್ನು ಕೊಲೆ ಮಾಡಲಾಗಿತ್ತು.
* 2014ರ ಏ.22ರಂದು ಮೈಸೂರಿನ ಭೈರವೇಶ್ವರ ನಗರದ ಶಿಲ್ಪಾ (19)ಳನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪದ ಕನ್ನಹಳ್ಳಿಯಲ್ಲಿ ಜೀವಂತವಾಗಿ ಸುಟ್ಟು ಹಾಕಿದ್ದರು.
* 2014ರ ಸೆ.14ರಂದು ಧಾರವಾಡ ಜಿಲ್ಲೆಯ ಶಿವಳ್ಳಿಯಲ್ಲಿ ಅಪ್ರಾಪ್ತೆ ಮತ್ತು ಆತನ ಪ್ರಿಯಕರ ಮಹೇಶ್‌ನ ಹತ್ಯೆ ಮಾಡಿದರು.
* 2015ರ ಜು.5ರಲ್ಲಿ ಬೆಂಗಳೂರು ಸಮೀಪದ ಹೆಸರಘಟ್ಟದಲ್ಲಿ ಕೊಪ್ಪಳ ಮೂಲದ ಕಸ್ತೂರಿ (25), ಬಸವರಾಜು (28) ಅವರ ಜೋಡಿ ಹತ್ಯೆ ಮಾಡಲಾಯಿತು.
* 2015ರ ಸೆ.12ರಂದು ರಾಮನಗರ ಜಿಲ್ಲೆಯ ಕೆ.ಜಿ.ಹಳ್ಳಿಯಲ್ಲಿ 16ರ ಅಪ್ರಾಪ್ತೆಯ ಹತ್ಯೆ ನಡೆಯಿತು.
* 2016ರ ಏ.3ರಂದು ಮಂಡ್ಯ ತಾಲೂಕಿನ ತಿಮ್ಮನಹೊಸೂರು ಗ್ರಾಮದಲ್ಲಿ ಮೋನಿಕಾ ಹತ್ಯೆ.
* 2016ರ ಏ.11ರಂದು ಮೈಸೂರಿನ ನಂಜನಗೂಡು ತಾಲೂಕಿನ ಚಂದ್ರವಾಡಿಯಲ್ಲಿ ಮಧುಕುಮಾರಿ(23)ಯ ಹತ್ಯೆ ನಡೆದಿದೆ.

ಮರ್ಯಾದಾ ಹತ್ಯೆ ಪ್ರಕರಣ ಕುರಿತಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ಇಂತಹ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗ್ರತಿ ಮೂಡಿಸಬೇಕಿದೆ. ಜಾತಿ, ಧರ್ಮವನ್ನು ಹೊರಗಿಟ್ಟು ತಮ್ಮ ಮಕ್ಕಳ ಹಿತದೃಷ್ಟಿಯಿಂದ ನೋಡುವ ಮನೋಭಾವ ಹೆತ್ತವರಿಗೆ ಬರಬೇಕು. ಮಕ್ಕಳನ್ನು ಹೊತ್ತು ಹೆತ್ತು ಸಾಕುವ ಅಧಿಕಾರ ಹೆತ್ತವರಿಗೆ ಇದೆ ಆದರೆ ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. [ಮಗಳಿಗೆ ಮಾವಿನ ರಸದಲ್ಲಿ ವಿಷಬೆರೆಸಿ ಹತ್ಯೆಗೈದ ಪೋಷಕರು]

Heart wrenching honor killings in Karnataka

ಸಮುದಾಯಗಳ ನಡುವಿನ ಅಂತರ, ಜಾತಿ, ಜಾತಿ ನಡುವಿನ ಕಂದರ, ಮಕ್ಕಳು ಮಾನಕಳೆದರು, ಮೋಸ ಮಾಡಿಬಿಟ್ಟರು ಎಂಬ ಆಕ್ರೋಶ, ಹೆತ್ತಮಕ್ಕಳನ್ನು ನಿರ್ಧಯಿಯಾಗಿ ಕೊಲ್ಲುವ ಮಟ್ಟಕ್ಕೆ ತಂದು ನಿಲ್ಲಿಸುತ್ತಿದೆ. ಆ ನಂತರ ತಪ್ಪಿನ ಅರಿವಾಗಿ ಕಣ್ಣೀರಿಟ್ಟರೇನು ಪ್ರಯೋಜನ? ಹೋದ ಜೀವ ಮತ್ತೆ ಬರಲ್ಲ.

ಅದರ ಬದಲಿಗೆ ಅವರ ಇಷ್ಟದಂತೆ ಬದುಕುವ ಬದುಕಿಗೊಂದು ಮುನ್ನುಡಿ ಬರೆಯುವ ಮನಸ್ಸು ನಮ್ಮದಾಗಬೇಕು. ಅದು ಸಾಧ್ಯವಾಗಬೇಕಾದರೆ ಆಸ್ತಿ, ಅಂತಸ್ತು, ಜಾತಿ, ಧರ್ಮ, ಮೇಲು, ಕೀಳೆಂಬ ಸಂಕೋಲೆಯನ್ನು ಕಳಚಿಕೊಂಡು ಹೊರಬರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪೋಷಿಸಿ ಬೆಳಿಸಿದ ಪೋಷಕರ ಬಗ್ಗೆಯೂ ಮಕ್ಕಳು ಚಿಂತಿಸಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Why honor killing are on the rise in Karnataka? Why parents are becoming so much intolerant towards love affairs of their children? Why children are not caring about their parents well being? After all, why parents are killing their kids? Any answers?
Please Wait while comments are loading...