ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿಯುವ ಮಾತನಾಡಿದ ರೇವಣ್ಣ!

ಬೆಂಗಳೂರು, ಫೆಬ್ರವರಿ 20 : ಲೋಕಸಭಾ ಚುನಾವಣೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಗೊಂದಲ ಮುಂದುವರೆದಿದೆ. 'ಮೈತ್ರಿ ಆಗಲಿಲ್ಲ ಎಂದರೆ ಫ್ರೆಂಡ್ಲಿ ಫೈಟ್' ಎಂದು ಹೇಳುವ ಮೂಲಕ ಎಚ್.ಡಿ.ರೇವಣ್ಣ ಕುತೂಹಲ ಮೂಡಿಸಿದ್ದಾರೆ.
ಹಾಸನದಲ್ಲಿ ಬುಧವಾರ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, 'ರಾಷ್ಟ್ರದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಕಾಂಗ್ರೆಸ್ ಪಕ್ಷದ ಜೊತೆ ಎಚ್.ಡಿ.ದೇವೇಗೌಡರು ಕೈ ಜೋಡಿಸಿದ್ದಾರೆ' ಎಂದು ಹೇಳಿದರು.
ಲೋಕಸಭಾ ಚುನಾವಣೆ ಮೈತ್ರಿ : ಜೆಡಿಎಸ್ಗೆ ಸಿಗುವ 7 ಕ್ಷೇತ್ರಗಳ ಪಟ್ಟಿ
'ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ಸಮ್ಮತಿ ಇಲ್ಲವಾದರೆ ಫ್ರೆಂಡ್ಲಿ ಫೈಟ್ ಮಾಡುತ್ತೇವೆ' ಎಂದು ರೇವಣ್ಣ ಹೇಳಿದರು. ಈಗಾಗಲೇ ಸೀಟು ಹಂಚಿಕೆ ಬಗ್ಗೆ ಉಭಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದಿದೆ.
ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಒಂದಾದ ಮೂವರು ನಾಯಕರು
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸುವುದಾಗಿ ಎರಡೂ ಪಕ್ಷಗಳು ಘೋಷಣೆ ಮಾಡಿದ್ದವು. ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆದಿತ್ತು...
ಲೋಕಸಭಾ ಚುನಾವಣೆ : ಹಲವು ಕಾರ್ಯಕ್ರಮ ಘೋಷಿಸಿದ ಕರ್ನಾಟಕ ಬಿಜೆಪಿ

ರೇವಣ್ಣ ಹೇಳಿದ್ದೇನು?
'ನಮಗೆ 12 ಸೀಟು ನೀಡಬೇಕೆಂದು ಜೆಡಿಎಸ್ ಶಾಸಕರು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಇದನ್ನು ತಿಳಿಸಿದ್ದೇವೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ದೇವೇಗೌಡರು ಚರ್ಚೆ ಮಾಡುತ್ತಾರೆ. ಈ ವಿಚಾರದಲ್ಲಿ ಅವರ ತೀರ್ಮಾನವೇ ಅಂತಿಮ' ಎಂದು ಎಚ್.ಡಿ.ರೇವಣ್ಣ ಹೇಳಿದರು.

ಮೈತ್ರಿಯಾಗಿ ಚುನಾವಣೆ ಎದುರಿಸಬೇಕು
'ರಾಷ್ಟ್ರದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಕಾಂಗ್ರೆಸ್ ಪಕ್ಷದೊಂದಿಗೆ ದೇವೇಗೌಡರು ಕೈ ಜೋಡಿಸಿದ್ದಾರೆ. 28 ಕ್ಷೇತ್ರಗಳಲ್ಲಿಯೂ ಜಯಗಳಿಸುವ ಉದ್ದೇಶವಿದ್ದರೆ ಮೈತ್ರಿಯಾಗಿ ಚುನಾವಣೆ ಎದುರಿಸಬೇಕು. ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ಇಲ್ಲವಾದಲ್ಲಿ ಫ್ರೆಂಡ್ಲಿ ಫೈಟ್ ಮಾಡುತ್ತೇವೆ' ಎಂದು ಎಚ್.ಡಿ.ರೇವಣ್ಣ ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಹೇಳಿಕೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ಮಂಗಳವಾರ ಮಾತನಾಡಿದ್ದರು. 'ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಸಂದೇಶ ನೀಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಆದರೆ, ಸೀಟಿಗಾಗಿ ಭಿಕ್ಷೆ ಬೇಡುವುದಿಲ್ಲ. 5, 3, 7 ಕ್ಷೇತ್ರಗಳು ಎಂಬುದು ಪ್ರಶ್ನೆಯಲ್ಲ ವಿ ಆರ್ ನಾಟ್ ಬೆಗ್ಗರ್ಸ್ ಎಂದು' ಹೇಳಿದ್ದರು.

ಇದು ಸಮ್ಮಿಶ್ರ ಸರ್ಕಾರ
ಸೀಟು ಹಂಚಿಕೆ ಬಗ್ಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಅವರೂ ಬೆಗ್ಗರ್ಸ್ ಅಲ್ಲ, ನಾವೂ ಬೆಗ್ಗರ್ಸ್ ಅಲ್ಲ ಇದು ಸಮ್ಮಿಶ್ರ ಸರ್ಕಾರ. ಸೀಟು ಹಂಚಿಕೆ ಸಂಬಂಧ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಬಿಟ್ಟುಕೊಡುವ ವಿಚಾರದಲ್ಲಿ ರಾಜಿ ಇಲ್ಲ' ಎಂದು ಹೇಳಿದ್ದರು.

ಮೈತ್ರಿಗೆ ತೊಡಕು ಏನು?
ಜೆಡಿಎಸ್ 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿದೆ. ಇವುಗಳಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದರು ಇರುವ ಕ್ಷೇತ್ರಗಳು ಇವೆ. ಆದರೆ, ಹಾಲಿ ಸಂಸದರ ಕ್ಷೇತ್ರ ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪಿಗೆ ಕೊಟ್ಟಿಲ್ಲ. ಆದ್ದರಿಂದ, ಮೈತ್ರಿ ಮಾತುಕತೆ ಅಂತಿಮವಾಗಿಲ್ಲ.