HD Kumaraswamy: ಕೈತಪ್ಪಿದ ಕೃಷಿ ಖಾತೆ; ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಪಡೆದ ಎಚ್‌ಡಿಕೆ
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದ್ದು, ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಪಡೆದುಕೊಂಡಿದ್ದಾರೆ.
ಕೃಷಿ ಸಚಿವನಾಗಲು ಎಚ್‌ಡಿ ಕುಮಾರಸ್ವಾಮಿ ಆಸಕ್ತಿ ಹೊಂದಿದ್ದರು. ಕೃಷಿ ಖಾತೆ ಪಡೆದು, ರಾಜ್ಯದಲ್ಲಿ ಕೃಷಿಕರ ಪರ ಹಲವು ಕೆಲಸ ಮಾಡುವುದಾಗಿ ಕೂಡ ಹೇಳಿದ್ದರು. ಆದರೆ, ಶಿವರಾಜ್ ಸಿಂಗ್ ಚೌವ್ಹಾಣ್ ಕೃಷಿ ಮತ್ತು ರೈತರ ಕಲ್ಯಾಣ ಖಾತೆ, ಗ್ರಾಮೀಣಾಭಿವೃದ್ಧಿ ಖಾತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ನ ವೆಂಕಟರಮಣೇಗೌಡ ವಿರುದ್ಧ 2,84,620 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮಂಡ್ಯ ಜಿಲ್ಲೆಯಿಂದ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವವರ ಪೈಕಿ ಎಚ್.ಡಿ.ಕುಮಾರಸ್ವಾಮಿ ನಾಲ್ಕನೆಯವರಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ.ಕೃಷ್ಣ, ಸಂಸದರಾಗಿದ್ದ ಅಂಬರೀಶ್ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಕೆ.ರೆಹಮಾನ್‌ಖಾನ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಂತರ ಮಂಡ್ಯ ಕ್ಷೇತ್ರದಿಂದ ಮೊದಲಬಾರಿಗೆ ಲೋಕಸಭೆ ಪ್ರವೇಶಿಸಿರುವ ಎಚ್.ಡಿ.ಕುಮಾರಸ್ವಾಮಿ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ.
1996ರಿಂದ 2024ರವರೆಗೆ ಆರು ಬಾರಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಲೋಕಸಭೆಗೆ ಸ್ಪರ್ಧಿಸಿ ಮೂರು ಬಾರಿ ವಿಜೇತರಾಗಿರುವ ಎಚ್.ಡಿ.ಕುಮಾರಸ್ವಾಮಿ ನಿರೀಕ್ಷೆಯಂತೆಯೇ ಕೇಂದ್ರದಲ್ಲಿ ಸಂಪುಟ ದರ್ಜೆಯ ಸ್ಥಾನ ಲಭಿಸಿದೆ.
ಮಂಡ್ಯದಿಂದ ಆಯ್ಕೆಯಾದ ಯೋಗ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಮಂಡ್ಯ ಜಿಲ್ಲೆ ಪ್ರಮುಖ ಪಾತ್ರ ವಹಿಸಿದಂತೆಯೇ, ಇದೀಗ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗುವುದರೊಂದಿಗೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗವನ್ನೂ ಜಿಲ್ಲೆಯ ಜನರು ದೊರಕಿಸಿಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಿಕ್ಕಿದೆ.
ದೇವೇಗೌಡರ ಪ್ರಭಾವ
ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ನರೇಂದ್ರಮೋದಿ ಸಂಪುಟಕ್ಕೆ ಸೇರಿಸಬೇಕೆಂಬ ಉದ್ದೇಶದಿಂದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎರಡು ದಿನ ಮುಂಚಿತವಾಗಿಯೇ ದೆಹಲಿಗೆ ತೆರಳಿ ಮೋದಿ ಸೇರಿದಂತೆ ಎನ್‌ಡಿಎ ಮಿತ್ರ ಪಕ್ಷದವರ ಮೇಲೆ ಪ್ರಭಾವ ಬೀರಿದ್ದರು. ದೇವೇಗೌಡರ ಪ್ರಭಾವವೂ ಎಚ್‌ಡಿಕೆಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವುದಕ್ಕೆ ಪ್ರಮುಖ ಕಾರಣವೆಂದೇ ಹೇಳಲಾಗುತ್ತಿದೆ.
ಕಾವೇರಿ ಸಮಸ್ಯೆಗೆ ಪರಿಹಾರ?
ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿ ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವ ಭರವಸೆಯನ್ನು ಜಿಲ್ಲೆಯ ಜನರಿಗೆ ನೀಡಿದ್ದಾರೆ. ಮಂತ್ರಿಯಾಗುವ ಅವಕಾಶ ಪಡೆದುಕೊಂಡು ಶತಮಾನಗಳಷ್ಟು ಹಳೆಯದಾದ ಸಮಸ್ಯೆಗೆ ಯಾವ ರೀತಿ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಾರೆ ಎನ್ನುವುದು ಎಲ್ಲರಲ್ಲೂ ತೀವ್ರ ಕುತೂಹಲವನ್ನು ಕೆರಳಿಸಿದೆ.












Click it and Unblock the Notifications