• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಒಂದೇ ವರ್ಷ ಆಡಳಿತ ನಡೆಸೋದು ಎಂದಿದ್ದಲ್ಲ; ಒಂದು ವರ್ಷವಾದರೂ ಇರ್ತೀನಲ್ಲ ಎಂದಿದ್ದು'

|

ಬೆಂಗಳೂರು, ಜೂನ್ 19: ತಾವು ಒಂದು ವರ್ಷದವರೆಗೆ ಮಾತ್ರ ಆಡಳಿತ ನಡೆಸುವುದಾಗಿ ಹೇಳಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ ಒಂದು ವರ್ಷವಾದರೂ ಇರುತ್ತೇನಲ್ಲವೇ? ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿದ್ದು. ಅದನ್ನು ತಪ್ಪಾಗಿ ಅರ್ಥೈಸಿ ಒಂದೇ ವರ್ಷದ ಸರ್ಕಾರ ಇರುವಂತೆ ವರದಿಗಳನ್ನು ಪ್ರಕಟಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ವಿಚಾರದಲ್ಲಿ ಗೊಂದಲಗಳು ಉಂಟಾದಾಗ ಈ ಸರ್ಕಾರ ಎಷ್ಟು ದಿನ ಎಂಬ ಪ್ರಶ್ನೆಗಳು ಎದುರಾದವು.

ಡಿಬೇಟ್ : ಎಲ್ಲದಕ್ಕೂ ಕುಮಾರಸ್ವಾಮಿ ಹೈಕಮಾಂಡ್ ಒಪ್ಪಿಗೆ ಪಡೆಯಬೇಕಾ?

ಆಗ ಮುಂದಿನ ಲೋಕಸಭೆ ಚುನಾವಣೆವರೆಗೆ ಒಂದು ವರ್ಷದವರೆಗಾದರೂ ಅಧಿಕಾರದಲ್ಲಿ ಇರುತ್ತೇನೆ ಅಲ್ಲವೇ ಎಂದು ಮರುಪ್ರಶ್ನೆ ಹಾಕಿದ್ದೆ. ಒಂದು ವರ್ಷವಲ್ಲ ಐದು ವರ್ಷ ಆಡಳಿತ ನಡೆಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಮ್ಮಿಶ್ರ ಸರಕಾರದ ಆಯಸ್ಸಿನ ಬಗ್ಗೆ ದೇವೇಗೌಡರಿಗೇ ಅನುಮಾನ ಕಾಡಿದರೆ ಹೇಗೆ

ಸಂವಾದದಲ್ಲಿ ಕುಮಾರಸ್ವಾಮಿ ಅವರ ಮಾತುಗಳಲ್ಲಿನ ಕೆಲವು ಅಂಶಗಳು ಇಲ್ಲಿವೆ.

ಸಾಲಮನ್ನಾಕ್ಕೆ ವೈಜ್ಞಾನಿಕ ವಿಧಾನ

ಸಾಲಮನ್ನಾಕ್ಕೆ ವೈಜ್ಞಾನಿಕ ವಿಧಾನ

ರೈತರ ಸಾಲಮನ್ನಾವನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ದೊಡ್ಡಮಟ್ಟದ ಸಾಹಸಕ್ಕೆ ಕೈಹಾಕಿದ್ದೇನೆ.

ಇಲ್ಲಿ ಸಾಲಮನ್ನಾದ ಹಣ ನೇರವಾಗಿ ರೈತರಿಗೆ ತಲುಪಬೇಕು. ಸಹಕಾರಿ ಬ್ಯಾಂಕುಗಳ ಅಥವಾ ಮಧ್ಯವರ್ತಿಗಳ ಹಾವಳಿಯಿಂದ ಅದು ದುರುಪಯೋಗ ಆಗದಂತೆ ತಡೆಯಬೇಕು.

ಇನ್ನೆರಡು ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರನ್ನು ಕರೆಯಿಸಿ ಸಾಲಮನ್ನಾದ ತಮ್ಮ ನಿಲುವು, ಬ್ಯಾಂಕುಗಳ ಅಭಿಪ್ರಾಯ ಮತ್ತು ಸಾಲಮನ್ನಾದ ವಿಧಾನಗಳ ಬಗ್ಗೆ ಚರ್ಚಿಸಲಿದ್ದೇನೆ. ಸಾಲಮನ್ನಾವನ್ನು ಸುಮ್ಮನೆ ಜಾರಿ ಮಾಡಲು ಸಾಧ್ಯವಿಲ್ಲ. ಆರ್ಥಿಕ ಕಾಯ್ದೆಯ ಅಡಿಯಲ್ಲಿ ಅನುಷ್ಠಾನಗೊಳಿಸಬೇಕು.

ಸಾಲಮನ್ನಾದಿಂದ ಆತ್ಮಹತ್ಯೆ ನಿಲ್ಲದು

ಸಾಲಮನ್ನಾದಿಂದ ಆತ್ಮಹತ್ಯೆ ನಿಲ್ಲದು

ಸಾಲಮನ್ನಾ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ಸಾಲಮನ್ನಾ ಮಾಡುವುದರಿಂದ ಆತ್ಮಹತ್ಯೆಗಳು ನಿಲ್ಲುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆತ್ಮಹತ್ಯೆಗೆ ಬೇರೆ ಬೇರೆ ಕಾರಣಗಳಿರುತ್ತವೆ.

ಆದರೆ, ರೈತರ ಸಾಲಮನ್ನಾ ವಿಚಾರದಲ್ಲಿ ನನ್ನ ನಿಲುವಲ್ಲಿ ಬದ್ಧತೆ ಇದೆ. ರೈತರ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸುವುದು ನನ್ನ ಗುರಿ. ಅದಕ್ಕೆ ಸರ್ಕಾರ ಈಗಿನಿಂದಲೇ ಕಾರ್ಯಪ್ರವೃತ್ತವಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ನೋಡಿ, ಸಾಕಷ್ಟು ಬದಲಾವಣೆಗಳನ್ನು ನೋಡುತ್ತೀರಿ.

ಎಚ್‌ಡಿಕೆ-ರಾಹುಲ್ ಭೇಟಿಯಿಂದ ಸಿದ್ದರಾಮಯ್ಯಗೆ ಗುದ್ದು!

ಇಂಥದ್ದೇ ಬೆಳೆಯಿರಿ ಅನ್ನಲು ಅವರು ಯಾರು?

ಇಂಥದ್ದೇ ಬೆಳೆಯಿರಿ ಅನ್ನಲು ಅವರು ಯಾರು?

ಕೇಂದ್ರ ಸರ್ಕಾರ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ರಚಿಸಿರುವ ಕಾವೇರಿ ನೀರು ನಿರ್ವಹಣಾ ಸ್ಕೀಂನಲ್ಲಿ ಸಾಕಷ್ಟು ಲೋಪಗಳಿವೆ.

ವರ್ಷಕ್ಕೆ ಇಂತಿಷ್ಟು ಪ್ರಮಾಣದ ನೀರು ಬಿಡಬೇಕು ಎಂದು ಈ ಮುಂಚೆ ಆದೇಶ ನೀಡಲಾಗುತ್ತಿತ್ತು. ಆದರೆ, ಇಲ್ಲಿ ಹತ್ತು ದಿನಕ್ಕೊಮ್ಮೆ ಇಷ್ಟು ಪ್ರಮಾಣದ ನೀರು ಬಿಡಬೇಕು ಎಂದು ಮಂಡಳಿ ಆದೇಶ ನೀಡುತ್ತದೆ. ಪ್ರತಿ ಹತ್ತು ದಿನಕ್ಕೆ ಜಲಾಶಯಗಳ ನೀರಿನ ಮಟ್ಟವನ್ನು ಅಳೆದು ನಾವು ವರದಿ ನೀಡಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಮಂಡಳಿಯ ಸದಸ್ಯರು ಇಲ್ಲಿ ನೀರಿನ ಲಭ್ಯತೆಯನ್ನು ನೋಡಿ ಕಾವೇರಿ ನದಿಪಾತ್ರದಲ್ಲಿ ಯಾವ ಬೆಳೆ ಬೆಳೆಯಬೇಕು ಎಂದು ಸೂಚನೆ ನೀಡುತ್ತಾರಂತೆ.

ನಾವು ಯಾವ ಬೆಳೆಯನ್ನು ಯಾವಾಗ ಬೆಳೆಯಬೇಕು ಎಂದು ಹೇಳಲು ಅವರು ಯಾರು? ನಮಗೆ ಬೇಕಾದ ಬೆಳೆಯನ್ನು ನಾವು ಬೆಳೆದುಕೊಳ್ಳುತ್ತೇವೆ. ಇವುಗಳನ್ನು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನದಟ್ಟು ಮಾಡಿದ್ದೇನೆ. ನೀವು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಮೊದಲೇ ಪ್ರಶ್ನಿಸಬೇಕಿತ್ತು ಎಂದು ಅವರು ಹೇಳಿದ್ದರು.

ದುಂದುವೆಚ್ಚ, ಕೆಟ್ಟ ಹೆಸರು

ದುಂದುವೆಚ್ಚ, ಕೆಟ್ಟ ಹೆಸರು

ನನ್ನ ಹಿಂದೆ ಮುಂದೆ ಭದ್ರತೆಯ ಕಾರುಗಳನ್ನು ಕಂಡಾಗ ಇದೆಲ್ಲ ದುಂದುವೆಚ್ಚ. ಜತೆಗೆ ಮುಖ್ಯಮಂತ್ರಿಯಾಗಿ ಝೀರೋ ಟ್ರಾಫಿಕ್ ಮಾಡುವುದರಿಂದ ಜನರು ನನ್ನನ್ನು ಬೈದುಕೊಳ್ಳುತ್ತಾರೆ. ಇವುಗಳಿಂದ ಕೆಟ್ಟ ಹೆಸರು ಬರುತ್ತದೆ. ನನಗೆ ಹೆಚ್ಚಿನ ಭದ್ರತೆ ಬೇಡ ಎನ್ನುತ್ತೇನೆ.

ಆದರೆ, ಅಧಿಕಾರಿಗಳು ಭದ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಬೆಂಗಳೂರಿನಿಂದ ದೆಹಲಿಗೆ ಕಮರ್ಷಿಯಲ್ ವಿಮಾನದಲ್ಲಿ ಒಂದು ಲಕ್ಷ ರೂ.ದಲ್ಲಿ ಹೋಗಬಹುದು.

ಆದರೆ ವಿಶೇಷ ವಿಮಾನದಲ್ಲಿ 38-40 ಲಕ್ಷ ವೆಚ್ಚವಾಗುತ್ತದೆ. ಹೀಗಾಗಿ ನಾನು ಕಮರ್ಷಿಯಲ್ ವಿಮಾನದಲ್ಲಿಯೇ ಓಡಾಡುತ್ತೇನೆ. ಇದರಿಂದ ಉಳಿಯುವ ಹಣದಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಬಳಸಬಹುದು.

ಸಾಂದರ್ಭಿಕ ಶಿಶು ಅರ್ಥವೇ ತಿಳಿದಿಲ್ಲ

ಸಾಂದರ್ಭಿಕ ಶಿಶು ಅರ್ಥವೇ ತಿಳಿದಿಲ್ಲ

ನಾನು ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಾಗ ಅನೇಕರು ಹಲವು ರೀತಿ ಅದನ್ನು ವ್ಯಾಖ್ಯಾನಿಸುತ್ತಿದ್ದಾರೆ. ಕೆಲವರು ಸಾಂದರ್ಭಿಕ ಶಿಶುವಿಗೆ ಕೈಕಾಲುಗಳೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಅವರಿಗೆ ಸಾಂದರ್ಭಿಕ ಶಿಶು ಪದದ ಅರ್ಥವೇ ತಿಳಿದಿಲ್ಲ.

ಸರ್ಕಾರದಲ್ಲಿ ಏನೋ ಆಗುತ್ತಿದೆ. ಸಿದ್ದರಾಮಯ್ಯ ಏನೋ ಮಾಡುತ್ತಿದ್ದಾರೆ ಎಂದೆಲ್ಲ ಸುದ್ದಿಗಳು ಪ್ರಸಾರವಾಗುತ್ತಿವೆ. ಸರ್ಕಾರ ಇಂದೋ ನಾಳೆಯೋ ಪತನವಾಗುತ್ತದೆ ಎಂಬ ಭಾವೆನಯನ್ನು ಜನರಲ್ಲಿ, ಅಧಿಕಾರಿಗಳಲ್ಲಿ ಬಿತ್ತಲಾಗುತ್ತಿದೆ.

ಬಸ್ ಪಾಸ್ ಹೊರೆ

ಬಸ್ ಪಾಸ್ ಹೊರೆ

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ಕೊಡಬೇಕು ಎಂದಿಲ್ಲ. ಅದನ್ನು ಎಲ್ಲರಿಗೂ ವಿಸ್ತರಿಸಬೇಕು ಎಂಬ ಅಭಿಪ್ರಾಯ ನನ್ನಲ್ಲೂ ಇದೆ. ಆದರೆ, ಇದರಿಂದ ಸರ್ಕಾರದ ಮೇಲೆ 630 ಕೋಟಿ ಹೊರೆಯಾಗುತ್ತದೆ.

ಬಿಎಂಟಿಸಿ ಮತ್ತು ಮೆಟ್ರೊಕ್ಕೆ ಒಂದೇ ಟಿಕೆಟ್ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಜತೆಗೆ ಸಂಚಾರ ದಟ್ಟಂಣೆಯೂ ತಗ್ಗುತ್ತದೆ. ಈ ಬಗ್ಗೆ ಏಕಟಿಕೆಟ್ ಜಾರಿಗೊಳಿಸುವ ಆಲೋಚನೆ ಇದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ.

ಅಭಿವೃದ್ಧಿ ವಿಚಾರದಲ್ಲಿ ನಾನು, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಎಲ್ಲ ಸಚಿವರೂ ಕಾರ್ಯೋನ್ಮುಖರಾಗಿದ್ದಾರೆ. ಯಾರೂ ಬೆಂಗಳೂರಿನಲ್ಲಿ ಕೂರುತ್ತಿಲ್ಲ. ರಾಜ್ಯ ಪ್ರವಾಸ ಮಾಡಿ ಜನರ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ.

ಮೊನ್ನೆ ನೀತಿ ಆಯೋಗದ ಸಭೆಗೆ ಹೋದಾಗಲೇ ಪ್ರಧಾನಿ, ಗೃಹಸಚಿವರು ಮತ್ತು ಜಲಸಂಪನ್ಮೂಲ ಸಚಿವರ ಭೇಟಿಗೆ ಸಮಯ ಪಡೆದು ಮಾತುಕತೆ ನಡೆಸಿದ್ದೇನೆ.

ಡಲ್ ಇರುವುದು ಏಕೆ?

ಡಲ್ ಇರುವುದು ಏಕೆ?

ನಾನು ದೆಹಲಿಯಲ್ಲಿದ್ದಾಗ ಹೆಚ್ಚು ಹಸನ್ಮುಖನಾಗಿರುತ್ತೇನೆ. ಬೆಂಗಳೂರಿಗೆ ಬಂದ ಕೂಡಲೇ ಡಲ್ ಆಗುತ್ತೇನೆ ಏಕೆ ಎಂದು ಅನೇಕರು ಕೇಳಿದ್ದಾರೆ. ದೆಹಲಿಯ ವಾತಾವರಣವೇ ಬೇರೆ, ಇಲ್ಲಿನ ಒತ್ತಡವೇ ಬೇರೆ.

ಬೆಳಿಗ್ಗೆಯಿಂದ ಮನೆಯಲ್ಲಿ ಜನತಾದರ್ಶನಕ್ಕಾಗಿ ಸುಮಾರು 450 ಜನರು ಮನೆ ಎದುರು ನಿಂತಿರುತ್ತಾರೆ. ಅವರೆಲ್ಲರ ಕಷ್ಟಸುಖಗಳನ್ನು ವಿಚಾರಿಸಬೇಕು.

ಗ್ರಾಮವಾಸ್ತವ್ಯದಿಂದ ಜನರ ಸಮಸ್ಯೆಗಳು ಹತ್ತಿರದಿಂದ ಪರಿಚಯವಾಗುತ್ತವೆ. ಹೀಗಾಗಿ ಗ್ರಾಮವಾಸ್ತವ್ಯವನ್ನು ಮತ್ತೆ ಆರಂಭಿಸುತ್ತೇನೆ.

ಬಜೆಟ್ ಮಂಡನೆ ಜುಲೈನಲ್ಲಿ

ಬಜೆಟ್ ಮಂಡನೆ ಜುಲೈನಲ್ಲಿ

ಶೀಘ್ರದಲ್ಲಿಯೇ ಸಚಿವ ಸಂಪುಟದ ಸಭೆ ಕರೆಯಲಾಗುತ್ತದೆ. ಇದರಲ್ಲಿ ಬಜೆಟ್ ಬಗ್ಗೆ ಚರ್ಚೆ ನಡೆಸಲಾಗುವುದು. ಜುಲೈ ಮೊದಲ ಅಥವಾ ಎರಡನೆಯ ವಾರದಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ. ಬಜೆಟ್‌ನಲ್ಲಿ ಯಾವ ಅಂಶಗಳನ್ನು ಸೇರಿಸಬೇಕು, ಯಾವ ಅಂಶಗಳಿಗೆ ಆದ್ಯತೆ ನೀಡಬೇಕು ಎಂಬುದನ್ನು ಸಂಪುಟ ಸಭೆಯಲ್ಲಿ ತೀರ್ಮಾನಿಸುತ್ತೇವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister HD Kumaraswamy interacted with media person in Bengaluru press club on Tuesday. Here is some points of kumaraswamy's reply to the questions.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more