ಅತ್ಯಾಚಾರಿಗಳಿಗೆ ಕಂಡಲ್ಲಿ ಗುಂಡು : ಎಚ್.ಡಿ.ಕುಮಾರಸ್ವಾಮಿ
ಬೀದರ್, ಜನವರಿ 17 : 'ನಾನು ಮುಖ್ಯಮಂತ್ರಿಯಾಗಿದ್ದರೆ ಅತ್ಯಾಚಾರ ಮಾಡುವವರನ್ನು ಶೂಟ್ಎಟ್ ಸೈಟ್ ಮಾಡಲು ನಿರ್ದೇಶನ ನೀಡುತ್ತಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬುಧವಾರ ಬೀದರ್‌ನ ಕರ್ನಾಟಕ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕುಮಾರಸ್ವಾಮಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೆ ವಿದ್ಯಾರ್ಥಿಗಳಿಂದ ಕುಮಾರಸ್ವಾಮಿ ಸಲಹೆಗಳನ್ನು ಸ್ವೀಕರಿಸಿದರು.
ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ, 'ನಮ್ಮ ನಾಡಗೀತೆಯಲ್ಲಿ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಲಾಗಿತ್ತು. ಆದರೆ, ಇಂದು ಸರ್ಕಾರ ನಡೆಸುವವರು ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು' ಎಂದರು.

'ಕಾನೂನು ರಕ್ಷಣೆ ಮಾಡುವಲ್ಲಿ ಆಡಳಿತ ನಡೆಸುವವರು ವಿಫಲರಾಗಿದ್ದಾರೆ. ಸಂಕ್ರಾತಿ ದಿನ ಹಿರಿಯ ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ, ಅವರ ಪತ್ನಿ ಸರವನ್ನು ಕಳವು ಮಾಡಿದ ಪ್ರಕರಣ ನಡೆದಿದೆ. ಇನ್ನು ಜನರಿಗೆ ರಕ್ಷಣೆ ಎಲ್ಲಿದೆ?' ಎಂದರು.
'ಕೆಲವು ಸಮಾಜಘಾತುಕ ಶಕ್ತಿಗಳಿಗೆ ನಾವು ತಪ್ಪು ಮಾಡಿದರೆ, ಅತ್ಯಾಚಾರ ಮಾಡಿದರೆ ಈ ದೇಶದ ವ್ಯವಸ್ಥೆಯಲ್ಲಿ ಸುಲಭವಾಗಿ ಪಾರಾಗಬಹುದು ಎಂದು ಕೊಂಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅತ್ಯಾಚಾರ ಶೂಟ್ಎಟ್ ಸೈಟ್ ಮಾಡಲು ನಿರ್ದೇಶನ ನೀಡುವಂತಹ ಕಠಿಣ ಕ್ರಮ ಕೈಗೊಳ್ಳುತ್ತೇನೆ' ಎಂದು ಹೇಳಿದರು.
'ಇಂತಹ ಕ್ರಮ ಕೈಗೊಂಡಾಗ ಭಯ ಉಂಟಾಗುವ ಸಾಧ್ಯತೆ ಇದೆ. ನಾಡಿನ ಪ್ರತಿ ಮಹಿಳೆಯು ನಿರ್ಭಯವಾಗಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕಿದೆ. ಅದಕ್ಕೆ ಕೆಲವು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ' ಎಂದರು.












Click it and Unblock the Notifications