ಕುಮಾರಸ್ವಾಮಿಗೆ ಶುರುವಾಗಿದ್ಯಾ ಅಸ್ವಿತ್ವದ ಭಯ! 1999 ರ ಇತಿಹಾಸ ಮತ್ತೆ ಮರುಕಳಿಸುವ ಆತಂಕವೇ? ಇಲ್ಲಿದೆ ವಿಶ್ಲೇಷಣೆ
ಬೆಂಗಳೂರು, ಆಗಸ್ಟ್ 12: ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಇದೀಗ ಅಸ್ತಿತ್ವದ ಭಯ ಕಾಡುತ್ತಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದ ದಳಪತಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಕೇವಲ 19 ಸೀಟು ಮಾತ್ರ.
ಹಳೇ ಮೈಸೂರು ಭಾಗದ ಒಕ್ಕಲಿಗರ ಭದ್ರಕೋಟೆಯನ್ನ ಭೇದಿಸಿ ಕಾಂಗ್ರೆಸ್'ಗೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚನೆ ಮಾಡಿದೆ. ಮತ್ತೆ ನಾವೇ ಕಿಂಗ್ ಮೇಕರ್ ಆಗುತ್ತೇವೆ. ನಾನೇ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸು ಕಂಡಿದ್ದ ಕುಮಾರಸ್ವಾಮಿ ಗೆ ಈಗಾಗಲೇ ಭಾರೀ ನಿರಾಸೆಯಾಗಿದ್ದು, ಇಂದು ಅಸ್ತಿತ್ವದ ಭಯ ಶುರುವಾಗಿದೆ.

ಹೌದು, 1999ರಲ್ಲಿ ಜೆಡಿಎಸ್ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು, 1994 ರಿಂದ 1999 ರವರೆಗೂ ಪೂರ್ಣಬಹುಮತದ ಸರ್ಕಾರ ನಡೆಸಿದ್ದ ಜನಾತದಳ, 1999 ರಲ್ಲಿ ಎರಡು ಭಾಗವಾಯಿತು. ಮಾಜಿ ಪ್ರಧಾನಿಗಳಾದ ದೇವೇಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನಡುವಿನ ಮುನಿಸು ಜನಾತ ದಳವನ್ನ ಛಿದ್ರ ಮಾಡಿತ್ತು. ಆಗ ಹುಟ್ಟಿಕೊಂಡಿದ್ದೆ ಜೆಡಿಎಸ್ ಪಕ್ಷ .
ಇನ್ನೂ 1999 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ರೆ, ರಾಮಕೃಷ್ಣ ಹೆಗಡೆ ಹಾಗೂ ಜೆ ಹೆಚ್ ಪಟೇಲ್ ಅವರ ಜೆಡಿಯು ಪಕ್ಷ 18 ಸ್ಥಾನಗಳನ್ನ ಪಡೆಯುತ್ತಿದೆ. ಇನ್ನೂ ಜನಾತದಳದ ಅಂತರ್ ಯುದ್ದದ ಲಾಭ ಪಡೆದ ಕಾಂಗ್ರೆಸ್ ಬರೋಬ್ಬರಿ 132 ಸ್ಥಾನಗಳನ್ನ ಪಡೆದು ಅಧಿಕಾರಕ್ಕೆ ಬರುತ್ತೆ. 10 ಸ್ಥಾನಗಳನ್ನ ಪಡೆದ ಜೆಡಿಎಸ್ ಪಕ್ಷದಲ್ಲಿ ಒಂದು ವರ್ಷದಲ್ಲಿ ಜೆಡಿಎಸ್ ಪಾಳಯದಲ್ಲಿ ಎರಡು ಶಾಸಕರು ಮಾತ್ರ ಉಳಿದಿದ್ರು, ಜೆಡಿಎಸ್ ನ 10 ಶಾಸಕರ ಪೈಕಿ 8 ಜನ ಶಾಸಕರನ್ನ ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷವನ್ನ ಸೇರುತ್ತಾರೆ. 1999 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಆಪರೇಷನ್ ಹಸ್ತದ ಮೂಲಕ ಜೆಡಿಎಸ್ ಅಸ್ತಿತ್ವಕ್ಕೆ ಭಯವನ್ನ ಹುಟ್ಟಿಸುತ್ತಾರೆ.
1999 ರಲ್ಲಿ ಜೆಡಿಎಸ್ ಅಸ್ತಿತ್ವದ ಭಯವನ್ನ ಹುಟ್ಟಿಸಿದ್ದು, ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಆಪರೇಷನ್ ಹಸ್ತದ ಮುದ್ದಾಳತ್ವ ವಹಿಸಿದ್ದು ಡಿ ಕೆ ಶಿವಕುಮಾರ್. 1999 ರಲ್ಲಿ ನಡೆದ ರಾಜಕೀಯ ಬೆಳವಣೆಗೆಗೂ ಹಾಗೂ ಪ್ರಸ್ತುತ ನಡೆಯುತ್ತಿರುವ ರಾಜಕೀಯಕ್ಕೂ ಬಹಳ ವ್ಯತ್ಯಾಸವಿಲ್ಲ.

1999 ರಲ್ಲಿ 10 ಸ್ಥಾನವನ್ನ ಜೆಡಿಎಸ್ ಪಡೆದಿದ್ರೆ, 132 ಸ್ಥಾನವನ್ನ ಕಾಂಗ್ರೆಸ್ ಪಡೆದು ಅಧಿಕಾರ ಹಿಡಿದಿತ್ತು. ಈ ವೇಳೆ ಜೆಡಿಎಸ್ ನ 10 ಶಾಸಕರಲ್ಲಿ 8 ಜನ ಶಾಸಕರನ್ನ ಪಕ್ಷಕ್ಕೆ ಕರೆತರುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ರು, ಇನ್ನೂ 2023 ರ ಚುನಾವಣೆಯಲ್ಲಿ ಜೆಡಿಎಸ್ ಕೇವಲ 19 ಸ್ಥಾನಗಳನ್ನ ಪಡೆದರೇ ಕಾಂಗ್ರೆಸ್ 135 ಸ್ಥಾನಗಳನ್ನ ಪಡೆದಿದೆ. ಇತ್ತ 19 ಸ್ಥಾನಗಳನ್ನ ಗೆದ್ದಿರುವ ದಳಪತಿಗಳಿಗೆ ಈ ಬಾರೀಯೂ ಸಹ ಆಪರೇಷನ್ ಹಸ್ತದ ಭಯ ಶುರುವಾಗಿದೆ.
ಹೌದು, 135 ಸ್ಥಾನಗಳನ್ನ ಗೆದ್ದಿರುವ ಕಾಂಗ್ರೆಸ್ ನಾಯಕರಿಗೆ 135 ಸ್ಥಾನ ಸಾಕಾಗಿಲ್ಲ. ನಮ್ಮ ಪಕ್ಷದ 12 ಜನ ಶಾಸಕರನ್ನ ಸಂಪರ್ಕಿಸಿದ್ದಾರೆ ಎಂದು ಬಾಂಬ್ ಸಿಡಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಅಸ್ತಿತ್ವದ ಭಯ ಶುರುವಾಗಿದಂತೆ ಕಾಣುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ನಲ್ಲಿ ಡಿ ಕೆ ಶಿವಕುಮಾರ್ ಪವರ್ ಫುಲ್ ಆಗುತ್ತಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಕಂಟಕ ಎದುರಾದಂತೆ ಕಾಣುತ್ತಿದೆ.
ರಾಜ್ಯ ಗೆಲ್ಲಬೇಕಾದ್ರೆ, ಮೊದಲು ಕೋಟೆ ಗೆಲ್ಲಬೇಕು, ನಾನು ಈ ಮಣ್ಣಿನ ಮನ ನನಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗ ಸಮುದಾಯ ಮುಂದೆ ಪದೇ ಪದೇ ಹೇಳಿದ್ದ ಡಿ ಕೆ ಶಿವಕುಮಾರ್, ಒಕ್ಕಲಿಗರ ಭದ್ರ ಕೋಟೆಯಾದ ರಾಮನಗರ ಮೈಸೂರು ಹಾಗೂ ಮಂಡ್ಯದಲ್ಲಿ ಜೆಡಿಎಸ್ ನೆಲಕಚ್ಚಿದ್ದು, ಮಂಡ್ಯ ಹಾಗೂ ರಾಮನಗರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು, ಕೇವಲ ಒಂದು ಸ್ಥಾನ ಮಾತ್ರ.
ಇನ್ನೂ ಒಕ್ಕಲಿಗರ ಕೋಟೆಯಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಡಿ ಕೆ ಶಿವಕುಮಾರ್ ಜೆಡಿಎಸ್ ಕೋಟೆಯನ್ನ ಒಡೆದು ಹಾಕಿದ್ರು ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಇತ್ತ ಹಳೇ ಮೈಸೂರು ಭಾಗಗಳಲ್ಲೂ ಬಿಜೆಪಿ ನಿಗೂಢ ಹೆಜ್ಜೆಯನ್ನ ಹಾಕುತ್ತಿದೆ. ಮಂಡ್ಯ ಭಾಗದಲ್ಲಿ ಠೇವಣಿಯನ್ನ ಪಡೆಯದ ಬಿಜೆಪಿ ಮತಗಳನ್ನ ಹೆಚ್ಚು ತೆಗೆದುಕೊಂಡಿದೆ.
ಒಟ್ನಲಿ, ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ತನ್ನ ಅಸ್ತಿತ್ವ ಪ್ರಶ್ನೆ ಎದುರಾಗಿದ್ದು, ಕಾಂಗ್ರೆಸ್ ದಿನದಿಂದ ದಿನಕ್ಕೆ ತನ್ನ ಜೆಡಿಎಸ್ ಕೋಟೆಯನ್ನ ವಶಪಡಿಸಿಕೊಳ್ಳುತ್ತಿದೆ. ಇತ್ತ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ವಿರುದ್ದ ಹೋರಾಡಲು ಸಜ್ಜಾಗಿದ್ದು, ಅಸ್ತಿತ್ವ ಭಯ ಮಧ್ಯಯೇ ಲೋಕಸಭಾ ಚುನಾವಣೆಯಲ್ಲಿ ಈ ರೀತಿಯ ತಪ್ಪು ಮರುಕಳಿಸಬಾರದು ಎಂದು ಜೆಡಿಎಸ್ ಈಗಾಗಲೇ ಚುನಾವಣಾ ತಂತ್ರಗಾರಿಕೆ ನಡೆಸಿದೆ.












Click it and Unblock the Notifications