KPSC: ಆಗಸ್ಟ್ 27ರ ಪೂರ್ವಭಾವಿ ಪರೀಕ್ಷೆ ಮುಂದೂಡಿ ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 15: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಆಗಸ್ಟ್ 27ರಂದು ಪರೀಕ್ಷೆಗಳು ನಡೆಯಲಿದ್ದು, ತಯಾರಿಯೂ ಪೂರ್ಣಗೊಂಡಿದೆ. ಆದರೆ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಪದೇ ಪದೇ ಒತ್ತಾಯಿಸಲಾಗುತ್ತಿದೆ.
ಈ ಒತ್ತಾಯಕ್ಕೆ ಈಗ ಮಂಡ್ಯ ಸಂಸದ, ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ ಸಹ ಧ್ವನಿಗೂಡಿಸಿದ್ದಾರೆ. ಈ ಕುರಿತು ಗುರುವಾರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ದಿನಾಂಕ ನಿಗದಿ ಮಾಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ' ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಒತ್ತಾಯವೇನು?; 'ಕರ್ನಾಟಕ ಲೋಕಸೇವಾ ಆಯೋಗ (KPSC) ಈ ತಿಂಗಳ 27ರಂದು 2023-24ರ KAS ಪೂರ್ವಭಾವಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ತರಾತುರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಕಲಚೇತನ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ದಿನಾಂಕ ನಿಗದಿ ಮಾಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಪರೀಕ್ಷೆ ಬರೆಯುವವರನ್ನೇ ಚಿತ್ರಹಿಂಸೆಗೆ ಒಳಪಡಿಸಿ KPSCಯು ಪರೀಕ್ಷೆ ನಡೆಸುವ ಆತುರದ ಹಿಂದಿರುವ ದುರುದ್ದೇಶವಾದರೂ ಏನು?. ಅನೇಕ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲಿಕ್ಕೇ ಸಾಧ್ಯವಾಗುತ್ತಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ, ಅದರಲ್ಲೂ ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದು ಬಹುದೊಡ್ಡ ಸಮಸ್ಯೆಯಾಗಿದೆ' ಎಂದು ವಿವರಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ (KPSC) ಈ ತಿಂಗಳ 27ರಂದು 2023-24ರ KAS ಪೂರ್ವಭಾವಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ತರಾತುರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಕಲಚೇತನ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ದಿನಾಂಕ ನಿಗದಿ ಮಾಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ KPSC…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 15, 2024
'ಕೆಲವರು ದುಡ್ಡು ಮಾಡಿಕೊಳ್ಳುವುದಕ್ಕೆ ಈ ಪರೀಕ್ಷೆಯನ್ನು ನಡೆಸುತ್ತಿರುವಂತೆ ಕಾಣುತ್ತಿದೆ. 4-5 ವರ್ಷಗಳಿಂದ ಕಷ್ಟಪಟ್ಟು ಓದಿರುವವರಿಗೆ ಅನ್ಯಾಯ ಮಾಡುವ ದುರಾಸೆ ಒಳ್ಳೆಯದಲ್ಲ. ಕರ್ನಾಟಕ ಕಾಂಗ್ರೆಸ್ ಸರಕಾರ ಹಾಗೂ KPSC ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು. ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಎಲ್ಲಾ ಆಕಾಂಕ್ಷಿಗಳಿಗೂ ಅನುಕೂಲ ಆಗುವ ದಿನಾಂಕ ನಿಗದಿಪಡಿಸಿ ಪರೀಕ್ಷೆ ನಡೆಸಲಿ' ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಆಗಸ್ಟ್ 27ರಂದು ಪರೀಕ್ಷೆ: ಕೆಪಿಎಸ್‌ಸಿ ಮೊದಲು ಆಗಸ್ಟ್ 25ರ ಭಾನುವಾರ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ ಹೇಳಿತ್ತು. ಆದರೆ ಅಂದು ಐಬಿಪಿಎಸ್ ಪರೀಕ್ಷೆಗಳು ಇರುವ ಕಾರಣ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂದು ಪರೀಕ್ಷೆ ಮುಂದೂಡಿಕೆಗೆ ಒತ್ತಾಯಿಸಲಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಆಗಸ್ಟ್ 27ಕ್ಕೆ ಪರೀಕ್ಷೆಗಳನ್ನು ನಿಗದಿ ಮಾಡಿ ಆದೇಶಿಸಲಾಗಿತ್ತು.
ಸದ್ಯದ ವೇಳಾಪಟ್ಟಿಯಂತೆ ಆಗಸ್ಟ್ 27ರ ಮಂಗಳವಾರ ಒಟ್ಟು ಎರಡು ಪತ್ರಿಕೆಗಳ ಪರೀಕ್ಷೆಗಳು ಒಂದೇ ದಿನ ನಡೆಯಲಿದೆ. ಬೆಳಗ್ಗೆ 10 ರಿಂದ 12 ಗಂಟೆಯ ತನಕ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2ರ ಪರೀಕ್ಷೆಗಳು ನಿಗದಿಯಾಗಿದೆ. ಆದರೆ ಈ ಪರೀಕ್ಷೆಯನ್ನು ಮುಂದೂಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬರುತ್ತಲೇ ಇದೆ.
ಕರ್ನಾಟಕ ಸರ್ಕಾರ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ (ಕೆಎಎಸ್) ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಲು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) ವಿಶೇಷ ಅವಕಾಶ ನೀಡಿತ್ತು. ಆದ್ದರಿಂದ ಒಟ್ಟು 384 ಹುದ್ದೆಗಳಿಗೆ 2,10,910 ಅರ್ಜಿಗಳು ಸಲ್ಲಿಕೆಯಾಗಿವೆ. ಈ ನೇಮಕಾತಿಯ ಪೂರ್ವಭಾವಿ ಪರೀಕ್ಷೆಗಳು ಆಗಸ್ಟ್ 27ರಂದು ನಿಗದಿಯಾಗಿದೆ.
ಇದುವರೆಗೂ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಕುರಿತು ಕೆಪಿಎಸ್‌ಸಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಇಂದಿನಿಂದ ಪರೀಕ್ಷೆ ಹಾಲ್ ಟಿಕೆಟ್‌ಗಳನ್ನು ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು.












Click it and Unblock the Notifications