ಕರ್ನಾಟಕಕ್ಕೂ ನಿನಗೂ ಏನು ಸಂಬಂಧ: ಬಿ.ಎಲ್.ಸಂತೋಷ್ ವಿರುದ್ಧ ಎಚ್‌ಡಿಕೆ ಏಕವಚನದಲ್ಲಿ ವಾಗ್ದಾಳಿ
ಬೆಂಗಳೂರು, ಡಿಸೆಂಬರ್ 19: ಕರ್ನಾಟಕಕ್ಕೂ ನಿನಗೂ ಏನು ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಬಿ.ಎಲ್.ಸಂತೋಷ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಕುಟುಂಬ, ಜಾತ್ಯತೀತ ಜನತಾದಳ ಹಾಗೂ ಪಂಚರತ್ನ ಯೋಜನೆಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

'ಅವನ್ಯಾರೋ ಜೋಳಿಗೆ ಇಡ್ಕೊಂಡು ಓಡಾಡೋನು ಏನೋ ಹೇಳಿದ್ದಾನೆ. ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು?' ಎಂದು ಸಂತೋಷ್ ಅವರನ್ನು ಪ್ರಶ್ನಿಸಿದರು.
'ಮಿಸ್ಟರ್ ಸಂತೋಷ್, ಲೂಟಿ ದರೋಡೆ ಮಾಡಿ ಕರ್ನಾಟಕ ಹಣವನ್ನ ಕೊಂಡೊಯ್ದಿದ್ದೀರಾ. ಲೂಟಿ ಹೊಡೆದು ನೀವು ಸಂತೋಷವಾಗಿದ್ದೀರಂತೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಅಪರೇಶನ್ ಕಮಲ ಮಾಡಿದಿರಿ. ನಮ್ಮ ಸರ್ಕಾರವನ್ನು ಬೀಳಿಸಿದ್ದೀರಿ' ಎಂದು ಕಿಡಿಕಾರಿದರು.
'ಪ್ರಧಾನಿ ಮೋದಿ ಅವರ ಬಳಿ ಕೇಳಿ, ನಮ್ಮ ಕುಟುಂಬ ಏನು ಅಂತ. ನಮ್ಮ ಮನೆತನ, ಮಾಜಿ ಪ್ರಧಾನಿಗಳ ಬಗ್ಗೆ ಹೇಳ್ತಾರೆ. ಲಘುವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ. 2023ಕ್ಕೆ ನಿಮ್ಮ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದನ್ನು ಒಮ್ಮೆ ಊಹೆ ಮಾಡಿಕೊಳ್ಳಿ' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

'ನಿಮ್ಮದು 40 ಪರ್ಸೆಂಟ್ ಸರ್ಕಾರ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ಮೋದಿ ಹೆಸರಿನಲ್ಲಿ ಹೊಟ್ಟೆಪಾಡು ನೋಡ್ಕೊಂಡಿರೋರು ನೀವು. ನಾನು ಸರಕಾರ ಮಾಡೋಣ ಎಂದು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎನ್ನುವುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡ್ಬೇಡಿ ಮಿಸ್ಟರ್ ಅಶೋಕ್, ಮಿಸ್ಟರ್ ಸಂತೋಷ್' ಎಂದು ವಾಗ್ದಾಳಿ ನಡೆಸಿದರು.
'ಬಿಜೆಪಿಯವರು ದರೋಡೆಕೋರರು, ಲೂಟಿಕೋರರು. ಇಂಥ ಬಿಜೆಪಿಯವರ ಜತೆ ಸೇರಿ ನಾನು ಸರ್ಕಾರ ನಡೆಸುವುದಕ್ಕೆ ಆಗುತ್ತಾ? ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ಆಗುತ್ತಾ? 2023ರ ಚುನಾವಣೆ ನಂತರ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಆಗ ಬಿಜೆಪಿಯವರು ನಮ್ಮ ಮುಂದೆ ಅರ್ಜಿ ಹಿಡಿದು ಬರುತ್ತಾರೆ. ಸಮಾಜವನ್ನು ಒಡೆಯುವ, ಜನರ ನಡುವೆ ದ್ವೇಷ ಬಿತ್ತುವ ಇಂಥವರ ಜತೆ ಸರಕಾರ ರಚನೆ ಮಾಡಲು ಸಾಧ್ಯವೇ' ಎಂದು ಮಾಜಿ ಮುಖ್ಯಮಂತ್ರಿ ಕೇಳಿದರು.
ಸಚಿವ ಅಶೋಕ್ ಮೇಲೆ ಹರಿಹಾಯ್ದ ಕುಮಾರಸ್ವಾಮಿ, ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ಚುನಾವಣೆ ಅದ ಮೇಲೆ ಮಾತನಾಡಿ ಎಂದು ಟಾಂಗ್ ಕೊಟ್ಟರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸದಸ್ಯ ಹೆಚ್.ಎಂ.ರಮೇಶಗೌಡ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications