ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಇದ್ದ ಅಡ್ಡಿಗಳು ನಿವಾರಣೆ
ಬೆಂಗಳೂರು, ಫೆಬ್ರವರಿ 23: ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಜಮೀನು ಸ್ವಾಧೀನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಮಾನ್ಯ ಮಾಡಿದೆ. ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿರುವುದರಿಂದ ಬಡಾವಣೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.
ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಿ 2014ರ ಜು.11ರಂದು ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪು ರದ್ದು ಕೋರಿ ಬಿಡಿಎ ಸಲ್ಲಿಸಿದ್ದ ಸುಮಾರು 140ಕ್ಕೂ ಅಧಿಕ ಪ್ರತ್ಯೇಕ ತಕರಾರು ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ, ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜು.11ರಂದು ಆದೇಶಿಸಿತ್ತು. ಇದೀಗ ಈ ತೀರ್ಪು ರದ್ದುಪಡಿಸಿರುವ ವಿಭಾಗೀಯ ಪೀಠವು ಭೂ ಸ್ವಾಧೀನ ಅಧಿಸೂಚನೆಯನ್ನು ಪುರಸ್ಕರಿಸಿದೆ.
ಬಿಡಿಎಗೆ ಮನವಿ ಸಲ್ಲಿಸಲು ಆದೇಶ: ಅಧಿಸೂಚನೆಯಲ್ಲಿ ಸ್ವಾಧೀನಕ್ಕೆ ಗುರುತಿಸಲಾಗಿದ್ದ ಜಾಗದಲ್ಲಿ ನರ್ಸರಿ ಅಭಿವೃದ್ಧಿಯಾಗಿರುವುದು ಹಾಗೂ ಕಟ್ಟಡ ನಿರ್ಮಾಣವಾಗಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ತಮ್ಮ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂಬ ಬಗ್ಗೆ ಯಾವುದಾದರೂ ಮನವಿಯಿದ್ದರೆ, ಭೂ ಮಾಲೀಕರು ಮೂರು ತಿಂಗಳಲ್ಲಿ ಬಿಡಿಎ ಮನವಿ ಸಲ್ಲಿಸಬೇಕು. ಬಿಡಿಎ ಆ ಮನವಿಗಳ ಕುರಿತು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಪೀಠ ಆದೇಶಿಸಿದೆ.
ಭೂ ಸ್ವಾಧೀನಕ್ಕೆ ಸರ್ಕಾರದಿಂದ ಬಿಡಿಎ ಅನುಮತಿ ಪಡೆದಿದ್ದು, ಅದು ಕಾನೂನು ಬದ್ಧವಾಗಿದೆ. ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬ ಕಾರಣಕ್ಕೆ ಇಡೀ ಭೂ ಸ್ವಾಧೀನ ಪ್ರಕ್ರಿಯೆಯೇ ಕಾನೂನು ಬಾಹಿರವಾಗಿದೆವೆಂದು ಅಧಿಸೂಚನೆ ರದ್ದುಪಡಿಸಲಾಗದು. ತಾರತಮ್ಯ ಇದ್ದರೆ, ಆ ಕುರಿತು ಭೂ ಮಾಲೀಕರು ಮನವಿ ಪತ್ರ ಸಲ್ಲಿಸಿ ತಮ್ಮ ಕುಂದುಕೊರತೆ ಬಗೆಹರಿಸಿಕೊಳ್ಳಬಹುದು ಎಂದು ಆದೇಶದಲ್ಲಿ ವಿಭಾಗೀಯ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ನಗರದ 12 ಗ್ರಾಮಗಳಲ್ಲಿ 4,814 ಎಕರೆ 15 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿ 2008ರ ಮೇ 21ರಂದು ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ನಂತರ 4,043 ಎಕರೆ 27 ಗುಂಟೆ ಸ್ವಾಧೀನಕ್ಕೆ ತೀರ್ಮಾನಿಸಿ 2020ರ ಫೆ.18ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು.
ಯಶವಂತಪುರ ಹೋಬಳಿಯ ಶೀಗೇಹಳ್ಳಿ, ಕನ್ನೇನಹಳ್ಳಿ, ಕೊಡಿಗೇಹಳ್ಳಿ, ಮೇಘನಹಳ್ಳಿ, ಕೆಂಗೇರಿ ಹೋಬಳಿಯ ಕೊಮ್ಮಘಟ್ಟ, ಭೀಮನಕೆರೆ, ಭೀಮನಕುಪ್ಪೆ/ ರಾಮಸಾಗರ, ಸೂಳಿಕೆರೆ, ಕೆಂಚೆನಹಳ್ಳಿ, ರಾಮಸಂದ್ರ, ಕೊಮ್ಮಘಟ್ಟ/ ಕೃಷ್ಣಸಾಗರ ಮತ್ತು ಚಲ್ಲಘಟ್ಟದಲ್ಲಿ ಈ 4,043 ಎಕರೆ 27 ಗುಂಟೆ ಜಮೀನು ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಈ ಅಧಿಸೂಚನೆ ಪ್ರಶ್ನಿಸಿ ಆರ್. ಶಂಕರನ್ ಸೇರಿದಂತೆ ಅನೇಕ ಭೂ ಮಾಲೀಕರು 2010ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭೂ ಸ್ವಾಧೀನಕ್ಕೆ ಗುರುತಿಸಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ ಮತ್ತು ಅಲ್ಲಿಯೇ ಮನೆಕಟ್ಟಿಕೊಂಡು ವಾಸವಾಗಿದ್ದೇವೆ. ಜಮೀನಿನ ಮೇಲೆ ನಮ್ಮ ಜೀವನ ಆಧರಿಸಿದೆ. ಹಾಗಾಗಿ, ತಮ್ಮ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಕೋರಿದ್ದರು.
ಏಕಸದಸ್ಯಪೀಠ ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು.












Click it and Unblock the Notifications