ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ತರಾಟೆ!
ಬೆಂಗಳೂರು, ಜೂನ್ 01: ಪರವಾನಿಗೆ ಪಡೆಯದೆ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಮಾಡಿದ್ದ ವ್ಯಕ್ತಿಯ ಬಂಧನವನ್ನು ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಕ್ರಮವನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೇ, ಜನ ಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ?, ಅಲ್ಲದೆ, ಶಾಸಕರು ಕಾನೂನು ರೂಪಿಸುವ ಕೆಲಸವನ್ನು ಮಾಡಬೇಕು. ಅದರ ಬದಲಾಗಿ ಇಂತಹ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದೆ.

ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ನಿಂಧಿಸಿದ ಹಾಗೂ ಪ್ರತಿಭಟನೆ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಶಾಸಕರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು.
ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿದ್ದಾರೆ, ನ್ಯಾಯಾಲಯದ ಕಾರ್ಯವನ್ನು ನೀವು ಮಾಡುವುದಕ್ಕೆ ಮುಂದಾಗಬೇಡಿ. ನಿಮ್ಮ ಕೆಲಸ ಕಾನೂನು ಮಾಡುವುದನ್ನು ಮಾಡಿ, ನ್ಯಾಯಾಲಯ ತನ್ನ ಕಾರ್ಯ ಕಾಡುವುದಕ್ಕೆ ಬಿಡಿ. ಮುಂದೊಂದು ದಿನ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಿದ್ದಾರೆ? ಎಂದು ನಮ್ಮ ಹಿಂದೆ ಬಂದು ಕೂತರೆ ನಾವೆಲ್ಲರೂ ಹೇಗೆ ಕೆಲಸ ಮಾಡಬೇಕು?. ಈ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಪೀಠ ಎಚ್ಚರಿಸಿತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ಬಿಜೆಪಿ ಯುವ ಮೋರ್ಚಾದ ಶಶಿರಾಜ್ ಶೆಟ್ಟಿ ಅವರನ್ನು ಪೊಲೀಸರು ಅಕ್ರಮ ಗಣಿಗಾರಿಗೆ ಆರೋಪದಲ್ಲಿ ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಸಂಬಂಧ ಬಂಧಿತನ ಪತ್ನಿ ಅರ್ಜಿದಾರರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದರು. ತಕ್ಷಣ ಬೆಳ್ತಂಗಡಿ ಠಾಣೆಗೆ ಬಂದ ಅರ್ಜಿದಾರರು ರಾತ್ರಿ 11.30ಕ್ಕೆ ಭೇಟಿ ನೀಡಿ ಯಾವ ಕಾರಣಕ್ಕೆ ಎಫ್‌ಐಆರ್ ಆಗಿದೆ ಎಂದು ಪ್ರಶ್ನಿಸಿದರು. ಸೂಕ್ತ ರೀತಿಯ ಉತ್ತರ ನೀಡಿರಲಿಲ್ಲ. ಕಾರಣದ ಧ್ವನಿಯನ್ನು ಜೋರು ಮಾಡಿ ಮಾತನಾಡಿದ್ದರು ಅಷ್ಟೇ ಎಂದರು.
ಪೊಲೀಸರನ್ನು ರಕ್ಷಿಸಿ: ಆಗ ನ್ಯಾಯಾಲಯ, ಪ್ರಸ್ತುತ ದಿನಗಳಲ್ಲಿ ಪೊಲೀಸರ ವಿರುದ್ಧ ಧರಣಿ ಮಾಡುವುದು, ಕಲ್ಲು ಎಸೆಯುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ಒಬ್ಬರಿಗೆ ತೊಂದರೆ ಆಗಬಹುದು. ಆದರೆ, ಪೊಲೀಸರನ್ನು ನಾವು ರಕ್ಷಣೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅವರು ಸೆವೆ ಸಲ್ಲಿಸುವುದಾದರೂ ಹೇಗೆ? ಎಂದು ಪೀಠ ಇದೇ ವೆಳೆ ಪ್ರಶ್ನೆ ಮಾಡಿತು.
ಜನ ಪ್ರತಿನಿಧಿಯಾದ ವ್ಯಕ್ತಿ ಯಾವುದೋ ವ್ಯಕ್ತಿಯನ್ನು ಬಂಧಿಸಿದಲ್ಲಿ ಪೊಲೀಸ್ ಠಾಣೆಗೆ ಹೋಗುವುದು ಎಷ್ಟು ಸರಿ. ಭಯೋತ್ಪಾದಕನನ್ನು ಪೊಲೀಸರು ಬಂಧಿಸುತ್ತಾರೆ. ಅವನ ಪತ್ನಿ ಬಂದು ನನ್ನ ಪತಿ ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರೆ ತಕ್ಷಣ ಜನ ಪ್ರತಿನಿಧಿ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವೇ, ಅರ್ಜಿದಾರರು ನೀವು ಠಾಣೆಗೆ ಹೋಗಬಾರದಾಗಿತ್ತು ಎಂದು ತಿಳಿಸಿತು, ಯಾವುದೇ ವ್ಯಕ್ತಿಯನ್ನು ಬಂಧಿಸಿದಲ್ಲಿ ಅದನ್ನು ಕಾನೂನು ಪ್ರಕಾರ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಬದಲಾಗಿ ಶಾಸಕರಾದವರು ಠಾಣೆಗೆ ಹೋದರೆ ಪೊಲೀಸರು ತಮ್ಮ ಸೇವೆ ಸಲ್ಲಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿತು.
ಈ ರೀತಿಯ ಪ್ರಕರಣದಲ್ಲಿ ಯಾವುದೇ ನ್ಯಾಯಾಲಯ ಆರೋಪಿತರ ಪರವಾಗಿ ಆದೇಶಿಸಿರುವ ಭಾರತದ ಯಾವುದೇ ನ್ಯಾಯಾಲಯದ, ವಿದೇಶ ನ್ಯಾಯಾಲಯಗಳು ಒಂದೇ ಒಂದು ಆದೇಶ ನೀಡಿರುವ ಉದಾಹರಣೆ ಇದಿಯೇ?. ಇದ್ದರೆ ಸಲ್ಲಿಸಿ ಅದರ ಆಧಾರದಲ್ಲಿ ಮುಂದಿನ ವಿಚಾರಣೆ ನಡೆಸಿ ಆದೇಶಿಸಲಾಗುವುದು ಎಂದು ಪೀಠ ತಿಳಿಸಿತು.
ವಾದ ಆಲಿಸಿದ ಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಮುಂದಿನ ವಿಚಾರಣೆಯವರೆಗೆ ಸಾವಧಾನದಿಂದ ಇರಿ. ಅರ್ಜಿದಾರರಿಗೆ ಯಾವುದೇ ತೊಂದರೆ ಮಾಡುವುದಕ್ಕೆ ಮುಂದಾಗಬೇಡಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ ಪಕ್ಷದ ಕಾರ್ಯಕರ್ತ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಇದರಿಂದ ಸಿಟ್ಟಾಗಿದ್ದ ಅರ್ಜಿದಾರರು ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ವಿರುದ್ಧ ಅವಾಚ್ಯವಾಗಿ ಬೈದು ಬೆದರಿಕೆ ಒಡ್ಡಿದ್ದರು. ಅಲ್ಲದೆ, ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಜತೆಗೆ, ಪ್ರತಿಭಟನೆ ನಡೆಸಿದ್ದರು. ಈ ಆರೋಪದಲ್ಲಿ ಎರಡು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಹರೀಶ್ ಪೂಂಜಾ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications