ನಿಷೇಧಿತ ಐಎಸ್‌ಐಎಸ್ ಸಂಘಟನೆ ಜೊತೆ ನಂಟು ಹೊಂದಿದ್ದ ವ್ಯಕ್ತಿಗೆ ಜಾಮೀನು ನಿರಾಕರಣೆ
ಬೆಂಗಳೂರು, ಏ.16. ನಿಷೇಧಿತ ಐಸಿಎಸ್ ಸಂಘಟನೆ ಜೊತೆ ನಂಟು ಹೊಂದಿದ್ದ ಸೌದಿ ಅರೇಬಿಯಾ ಮೂಲದ ಜುಹಾಬ್ ಹಮೀದ್ ಶಕೀಲ್ ಮನ್ನಾ @ ಜೋಹಿಬ್ ಮನ್ನಾ ಎಂಬ ವ್ಯಕ್ತಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಜುಹಾಬ್ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠದ ಜಾಮೀನು ನಿರಾಕರಿಸಿರುವ ಅಧೀನ ನ್ಯಾಯಾಲಯದ ಆದೇಶ ಸರಿ ಇದೆ ಎಂದು ಹೇಳಿದೆ.
ಆರೋಪಿ ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಸಂಘಟನೆಗೆ ಮುಸ್ಲಿಂ ಯುವಕರನ್ನು ಪ್ರಚೋದನೆ ಮಾಡಿ ಸೇರಿಸಿ ಅವರ ಜೊತೆ ಅಪರಾಧಿಕ ಪಿತೂರಿಗಳನ್ನು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಕೋರ್ಟ್ ಆದೇಶವೇನು? ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ "ಸಿಆರ್ ಪಿಸಿ ಸೆಕ್ಷನ್ 43 ಡಿ ಅನ್ವಯ ಎಸ್ ಪಿಪಿ ಹೇಳಿಕೆ ಆಧರಿಸಿ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸುವ ಅಧೀನ ನ್ಯಾಯಾಲಯದ ಆದೇಶ ಸರಿ ಇದೆ, ಅದರಲ್ಲಿ ಹಸ್ತಕ್ಷೇಪ ಅಥವಾ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ'' ಎಂದು ಹೇಳಿದೆ.
ತನಿಖಾಧಿಕಾರಿಯ ವಿಚಾರಣೆ ವೇಳೆ ಆರೋಪಿ ಇನ್ನೂ ಹೆಚ್ಚಿನ ಪಿತೂರಿಯಲ್ಲಿ ತೊಡಗಿದ್ದಾನೆ ಎಂಬುದು ಕಂಡು ಬಂದರೆ, ಅಂತಹ ಸಂದರ್ಭದಲ್ಲಿ ತನಿಖಾಧಿಕಾರಿ ಎಸ್ ಪಿಪಿ ಮೂಲಕ ಅರ್ಜಿ ಸಲ್ಲಿಸಿ ಸೆಕ್ಷನ್ 43ಡಿ(2)(ಬಿ) ಅಡಿ ನ್ಯಾಯಾಂಗ ಬಂಧನ ಅವಧಿಯಲ್ಲಿ 180 ದಿನಗಳಿಗೆ ವಿಸ್ತರಿಸಲು ಅರ್ಜಿ ಸಲ್ಲಿಸಬಹುದು. ಈ ಪ್ರಕರಣದಲ್ಲೂ ಅದೇ ಆಗಿದೆ, ಎನ್ ಐಎ ಮನವಿಯನ್ನು ಮಾನ್ಯ ಮಾಡಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಅಧೀನ ನ್ಯಾಯಾಲಯ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿರುವುದರಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120ಬಿ, 125 ಮತ್ತು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967 ಸೆಕ್ಷನ್ 17, 18 ಮತ್ತು 18 ಬಿ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಆತ ಜೀವನೋಪಾಯಕ್ಕಾಗಿ ಕುಟುಂಬದೊಂದಿಗೆ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದನು.
ಆತನನ್ನು ಭಾರತಕ್ಕೆ ಗಡಿಪಾರಾಗುವ 13 ತಿಂಗಳು ಮುನ್ನ 2020ರ ಅ.5ರಂದು ಸೌದಿ ಅರೇಬಿಯಾದಲ್ಲಿ ಎನ್ ಐಎ ಬಂಧಿಸಿತ್ತು. 2021ರ ನ.11ರಂದು ಅವರ ಇಡೀ ಕುಟುಂಬವನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.
ಆನಂತರ ಆತನ ವಿರುದ್ಧ ವಿಚಾರಣೆ ನಡೆಸಿದಾಗ ಆತ ಐಸಿಎಸ್ ಸಂಘಟನೆ ಜೊತೆ ನುಂಟು ಹೊಂದಿರುವುದು ಮತ್ತು ಅದಕ್ಕೆ ಮುಸ್ಲಿಂ ಯುವಕರನ್ನು ಸೇರಿಸುವ ಕೆಲಸ ಮಾಡುತ್ತಿದ್ದನೆಂಬುದು ಕಂಡು ಬಂದಿದೆ. ಸಂಘರ್ಷ ಪೀಡಿತ ಸಿರಿಯಾದಲ್ಲಿ ಐಸಿಎಸ್ ಸಂಘಟನೆಗೆ ಹಣ ಸಂಗ್ರಹಿಸಲು ಅಗ್ಗಾಗ್ಗೆ ಪ್ರಯಾಣ ಬೆಳೆಸುತ್ತಿದ್ದ ಎನ್ನಲಾಗಿದೆ. ಆತನ ನ್ಯಾಯಾಂಗ ಬಂಧನ ಅವಧಿ 90 ದಿನಗಳಿಗೆ ಮುಕ್ತಾಯವಾಗಿತ್ತು, ಆದರೆ ಎನ್ ಐಎ ಮನವಿ ಮೇರೆಗೆ ಆ ಅವಧಿಯನ್ನು 180 ದಿನ ವಿಸ್ತರಣೆ ಮಾಡಲಾಗಿತ್ತು.
ಅದನ್ನು ಪ್ರಶ್ನಿಸಿ ಆತ ನ್ಯಾಯಾಲಯದ ಮೊರೆ ಹೋಗಿದ್ದನು. 90 ದಿನಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ತನಗೆ ಸಹಜವಾಗಿಯೇ ಜಾಮೀನು ಮಂಜೂರು ಮಾಡಬೇಕೆಂದು ಆತ ನ್ಯಾಯಾಲಯದ ಮೆಟ್ಟಿಲೇರಿದ್ದನು.












Click it and Unblock the Notifications