ಎಂಎಲ್‌ಸಿ ತುಳಸಿ ಮುನಿರಾಜೇಗೌಡ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು ಜು.21. 2018ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಹಣ ಆಮಿಷವೊಡ್ಡಲು ಮುಂದಾದ ಆರೋಪ ಸಂಬಂಧ ಬಿಜೆಪಿ ಅಭ್ಯರ್ಥಿ, ಹಾಲಿ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದರಿಂದಾಗಿ ಮುನಿರಾಜೇಗೌಡರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಏಕಸದಸ್ಯಪೀಠ ಈ ಆದೇಶ ಮಾಡಿದೆ. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ "ಕಾನೂನು ಪ್ರಕಾರ ಚುನಾವಣಾ ನೀತಿ ಸಂಹಿತೆ ಆರೋಪ ಸಂಬಂಧ ಚುನಾವಣಾಧಿಕಾರಿಗಳು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಬೇಕಾಗುತ್ತದೆ. ದೂರಿನ ಅಂಶಗಳು ಮೇಲ್ನೋಟಕ್ಕೆ ಸತ್ಯ ಎಂದು ಕಂಡುಬಂದರೆ ತನಿಖೆ ನಡೆಸಲು ಪೊಲೀಸರಿಗೆ ಕೋರ್ಟ್ ನಿರ್ದೇಶಿಸಬಹುದು. ಆದರೆ, ಈ ಪ್ರಕರಣದಲ್ಲಿ ಚುನಾವಣಾಧಿಕಾರಿ ನೇರವಾಗಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಹಾಗಾಗಿ, ದೂರು ದಾಖಲೆಯಲ್ಲಿ ಕಾನೂನು ಲೋಪವಾಗಿದ್ದು, ಅದಕ್ಕೆ ಮಾನ್ಯತೆ ಇಲ್ಲ'' ಎಂದು ಹೇಳಿದೆ.
ತುಳಸಿ ಮುನಿರಾಜುಗೌಡ ವಿರುದ್ದದ ದೂರು ಮತ್ತು ಆ ಕುರಿತ 24ನೇ ಎಸಿಎಂಎಂ ಕೋರ್ಟ್ ವಿಚಾರಣೆ ರದ್ದುಪಡಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ:
2018ರ ಮೇ 27ರಂದು ಮಾದರಿ ಚುನಾವಣಾ ನೀತಿ ಸಂಹಿತೆ ಅಧಿಕಾರಿಯಾಗಿದ್ದ ವಿ.ಕೃಷ್ಣ, ಯಶವಂತಪುರ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ರಾಜರಾಜೇಶ್ವರಿ ವಿಧಾಸಭಾ ಕ್ಷೇತ್ರದ ಮುತ್ಯಾಲನಗರ ವಾರ್ಡ್ ನಂ.17ರ ವ್ಯಾಪ್ತಿಯ ಜೆ.ಪಿ.ಪಾರ್ಕ್ ಹಿಂಭಾಗದ ಗೇಟ್ ಬಳಿ 2018ರ ಮೇ 27ರಂದು ಮಧ್ಯಾಹ್ನ ಪ್ರಶಾಂತ ರೆಡ್ಡಿ ಎಂಬಾತ ಕಾರಿನಲ್ಲಿ ಎರಡು ಸಾವಿರ ಮುಖಬೆಲೆಯ ಒಂದು ಲಕ್ಷ ರೂ. ಹಣ ಇಟ್ಟುಕೊಂಡಿದ್ದರು. ಅವರ ಬಳಿ ರಾಜರಾಜೇಶ್ವರಿನಗರ ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಎಂಬುವವರ 290 ಪ್ರಚಾರ ಪತ್ರಗಳು, ಬಿಜೆಪಿಯ ಕಮಲದ ಹೂ ಇರುವ ಟೋಪಿ, ಐದು ಕೇಸರಿ ಮತ್ತು ಬಳಿ ಬಣ್ಣದ ಟೋಪಿಗಳು, ಎರಡು ಕೇಸರಿ ಬಣ್ಣದ ಶಾಲಗಳಿದ್ದವು ಎಂದು ದೂರುದಾರರು ಆರೋಪಿಸಿದ್ದರು.
ಅಲ್ಲದೆ, ಈ ಬಗ್ಗೆ ಪ್ರಶ್ನಿಸಿದಾಗ ಪ್ರಶಾಂತರೆಡ್ಡಿ ಸಮಂಜಸ ಉತ್ತರ ನೀಡಲಿಲ್ಲ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಮತದಾರರಿಗೆ ಹಂಚಲು ಈ ಹಣ ತೆಗೆದುಕೊಂಡು ಬಂದಿರುವುದು ಮೇಲ್ನೊಟಕ್ಕೆ ಕಂಡುಬರುತ್ತದೆ. ಆದ್ದರಿಂದ ಪ್ರಕರಣ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಕೋರಿದ್ದರು.

ಈ ದೂರು ಆಧರಿಸಿ ಪ್ರಶಾಂತ್ ರೆಡ್ಡಿ ಮತ್ತು ತುಳಸಿ ಮುನಿರಾಜುಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ತನಿಖೆ ಪೂರ್ಣಗೊಳಿಸಿ 24ನೇ ಎಸಿಎಂಎಂ ನ್ಯಾಯಾಲಯದಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.












Click it and Unblock the Notifications