ಕೆಜಿಎಫ್-2ನಲ್ಲಿ ಧೂಮಪಾನ ವೈಭವೀಕರಣ ಪ್ರಶ್ನಿಸಿದ್ದ ಪಿಐಎಲ್ ವಜಾ
ಬೆಂಗಳೂರು ಮೇ 25: ಭಾರತೀಯ ಚಲನಚಿತ್ರ ರಂಗದಲ್ಲಿಯೇ ದೊಡ್ಡ ಇತಿಹಾಸ ನಿರ್ಮಿಸಿರುವ ಕೆಜಿಎಫ್-2 ಚಲನಚಿತ್ರದಲ್ಲಿ ಧೂಮಪಾನವನ್ನು ವೈಭೀಕರಿಸಲಾಗಿದೆ ಎಂದು ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕ್ಯಾನ್ಸರ್ ರೋಗಿಗಳ ನೆರವಿನ ಸಂಘ ಮತ್ತು ವರ್ವ್ ಫೌಂಡೇಷನ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಅರ್ಜಿದಾರರ ವಾದ ಮಂಡಿಸಿದ ನ್ಯಾಯವಾದಿ ರವಿಶಂಕರ್, ಕೆಜಿಎಫ್-2 ಚಲನಚಿತ್ರದ ಬಿಡುಗಡೆ ಪ್ರಶ್ನಿಸಿಸಲಾಗಿದೆ. ಚಿತ್ರದಲ್ಲಿ ಚಿತ್ರದಲ್ಲಿ ಧೂಮಪಾನವನ್ನು ವಿಜೃಂಭಿಸಲಾಗಿದೆ. ಅತಿಯಾದ ಧೂಪಮಾನದಿಂದ ಆಗುವ ಪರಿಣಾಮಗಳ ಬಗ್ಗೆ ಚಿತ್ರದಲ್ಲಿ ಕಿಂಚಿತ್ತೂ ಸಾಮಾಜಿಕ ಕಾಳಜಿ ತೋರ್ಪಡಿಸಿಲ್ಲ ಎಂದರು.

ಅಲ್ಲದೆ, ಕೆಜಿಎಫ್ 2 ಚಿತ್ರ ಬಿಡುಗಡೆಗೆ ತಡೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದಾಗಿ ಅದರ ವಿಚಾರಣೆ ತಡವಾಗಿದೆ, ಹಾಗಾಗಿ ಚಿತ್ರದ ನಿರ್ಮಾಪಕರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಅದಕ್ಕೆ ನ್ಯಾಯಪೀಠ, ಕೆಜಿಎಫ್-2 ಚಲನಚಿತ್ರ ಈಗಾಗಲೇ ಬಿಡುಗಡೆಯಾಗಿ ಎಲ್ಲೆಡೆ ಪ್ರದರ್ಶನವಾಗುತ್ತಿದೆ, ಈ ಹಂತದಲ್ಲಿ ಯಾವುದೇ ಆದೇಶ ನೀಡಲಾಗದು, ಅರ್ಜಿ ಮಾನ್ಯ ಮಾಡಲಾಗದು ಎಂದು ಹೇಳಿ ಪಿಐಎಲ್ ಅನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತು.

ಅರ್ಜಿಯಲ್ಲಿ ಕೇಂದ್ರೀಯ ಸೆನ್ಸಾರ್ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಮೆಸರ್ಸ್ ಹೊಂಬಾಳೆ ಫಿಲಂಸ್, ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನವೀನ್ ಕುಮಾರ್ ಗೌಡ ಅಲಿಯಾಸ್ ಯಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.
2022ರ ಮಾ.11ಕ್ಕೆ ಅಂದರೆ ಚಿತ್ರ ಬಿಡುಗಡೆ ಮುನ್ನವೇ ಪಿಐಎಲ್ ಹೂಡಲಾಗಿತ್ತು. ಆದರೆ ಅಫೀಸ್ ಆಕ್ಷೇಪಣೆಗಳನ್ನು ಇತ್ಯರ್ಥ ಮಾಡದಿರುವುದು ಮತ್ತಿತರ ಕಾರಣಗಳಿಂದಾಗಿ ಆ ಅರ್ಜಿ ತಡವಾಗಿ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿದೆ.












Click it and Unblock the Notifications