ವಿದೇಶ ಪ್ರಯಾಣಕ್ಕೆ ಅನುಮತಿ ಕೇಳಿದ ನಲಪಾಡ್, ಅರ್ಜಿ ಇತ್ಯರ್ಥ
ಬೆಂಗಳೂರು, ಆಗಸ್ಟ್ 27 : ವಿದೇಶ ಪ್ರಯಾಣಕ್ಕೆ ಅನುಮತಿ ಕೇಳಿದ್ದ ಮೊಹಮ್ಮದ್ ನಲಪಾಡ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಷರತ್ತು ಬದ್ಧ ಜಾಮೀನು ಪಡೆದಿದ್ದಾರೆ.
ಸೋಮವಾರ ಜಾನ್ ಮೈಕಲ್ ಕುನ್ಹಾ ಅವರ ಏಕಸದಸ್ಯ ಪೀಠ ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇತ್ಯರ್ಥಗೊಳಿಸಿತು. ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು.
2018ರ ಫೆಬ್ರವರಿ 17ರಂದು ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಪ್ರಮುಖ ಆರೋಪಿ. ಜೂನ್ 14ರಂದು ಕರ್ನಾಟಕ ಹೈಕೋರ್ಟ್ ಮೊಹಮ್ಮದ್ ನಲಪಾಡ್‌ಗೆ ಜಾಮೀನು ನೀಡಿತ್ತು.

ಜಾಮೀನು ನೀಡುವಾಗ ಬೆಂಗಳೂರು ಬಿಟ್ಟು ತೆರಳುವಂತಿಲ್ಲ, ಪಾಸ್‌ಪೋರ್ಟ್‌ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಈ ಷರತ್ತುಗಳನ್ನು ಸಡಿಲಗೊಳಿಸುವಂತೆ ಮೊಹಮ್ಮದ್ ನಲಪಾಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
'ನನ್ನ ತಮ್ಮ ಬ್ರಿಟನ್‌ನಲ್ಲಿದ್ದಾನೆ. ಆತನನ್ನು ಭೇಟಿ ಮಾಡಲು 15 ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಬೇಕು. ಆದ್ದರಿಂದ, ಜಾಮೀನಿನ ಷರತ್ತು ಸಡಿಲಿಸಬೇಕು' ಎಂದು ಮೊಹಮ್ಮದ್ ನಲಪಾಡ್ ಅರ್ಜಿಯಲ್ಲಿ ಮನವಿ ಮಾಡಿದ್ದರು.












Click it and Unblock the Notifications