ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಸಿಬಿಐ ತನಿಖೆ ಆಗಲಿದೆಯೇ?
ಬೆಂಗಳೂರು, ಜುಲೈ 21 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಿದೆ. ಮಂಗಳವಾರ ನ್ಯಾಯಮೂರ್ತಿ ಎನ್.ಕುಮಾರ್ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಲಂಚದ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆದೇಶಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. [ಲೋಕಾಯುಕ್ತ ಕಿತ್ತೊಗೆಯಲು ಬೀದಿ ಹೋರಾಟವೊಂದೇ ಬಾಕಿ!]

ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ಪೀಠ ಅರ್ಜಿಯ ವಿಚಾರಣೆಯನ್ನು ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಿದೆ. 20 ದಿನಗಳ ಎಸ್‌ಐಟಿ ತನಿಖೆಯ ಪ್ರಗತಿ ಏನು? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು, ಮತ್ತೊಂದು ನ್ಯಾಯಪೀಠದಲ್ಲಿ ಅಶ್ವಿನ್ ರಾವ್ ಸಲ್ಲಿಸಿರುವ 2 ಅರ್ಜಿಯ ವಿಚಾರಣೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದರು. ಆದ್ದರಿಂದ ಈ ಅರ್ಜಿಯ ವಿಚಾರಣೆಯನ್ನು ಅದೇ ಪೀಠಕ್ಕೆ ವರ್ಗಾವಣೆ ಮಾಡಲಾಯಿತು. [SIT ತಂಡದಲ್ಲಿ ಇರುವ ಅಧಿಕಾರಿಗಳ ಪಟ್ಟಿ]
ಒಂದು ವಿಭಾಗೀಯ ಪೀಠ ಅದೇ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಿರುವಾಗ ಮತ್ತೊಂದು ಪೀಠ ವಿಭಿನ್ನ ತೀರ್ಪು ನೀಡಿದರೆ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಶ್ವಿನ್ ರಾವ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠವೇ ಈ ಪಿಐಎಲ್ ವಿಚಾರಣೆ ನಡೆಸುವುದು ಸೂಕ್ತ ಎಂದು ಹೇಳಿದ ಕೋರ್ಟ್, ಅರ್ಜಿಯನ್ನು ವರ್ಗಾಯಿಸಿತು.
ಇಂದು ವಿಚಾರಣೆ : ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಮತ್ತು ಆಂತರಿಕ ತನಿಖೆಗೆ ತಡೆ ನೀಡಬೇಕು ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎನ್.ಕುಮಾರ್ ಅವರ ವಿಭಾಗೀಯ ಪೀಠದ ಮುಂದೆ ಮಂಗಳವಾರ ನಡೆಯಲಿದೆ, ಇದೇ ಪೀಠ ಹಿರೇಮಠ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಎಸ್.ಆರ್.ಹಿರೇಮಠ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ಸರ್ಕಾರ ಎಸ್‌ಐಟಿ ತನಿಖೆಗೆ ಪ್ರಕರಣವನ್ನು ವಹಿಸಿ 20 ದಿನಗಳು ಕಳೆದಿವೆ. ತನಿಖೆಯ ಪ್ರಗತಿ ಏನಾಗಿದೆ? ಎಂದು ಪ್ರಶ್ನಿಸಿದರು. ಈ ಕುರಿತು ಕೋರ್ಟ್‌ಗೆ ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇವೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು ಹೇಳಿಕೆ ನೀಡಿದರು.












Click it and Unblock the Notifications