ಬಿಎಸ್‌ವೈ ಸಂಧಾನ ಯಶಸ್ವಿ, ಹಾಲಪ್ಪ ಬಿಜೆಪಿ ಬಿಡಲ್ಲ!
Recommended Video

ಬೆಂಗಳೂರು, ಏಪ್ರಿಲ್ 03 : ಸಾಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಂತೆ ಕಾಣುತ್ತಿದೆ. ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಕ್ಷೇತ್ರದ ಟಿಕೆಟ್ ಯಾರಿಗೆ? ಎಂಬುದು ಇನ್ನೂ ಖಚಿತವಾಗಿಲ್ಲ.
ಹರತಾಳು ಹಾಲಪ್ಪ ಅವರು ಸೋಮವಾರ ರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಹಾಲಪ್ಪ ಅವರ ಜೊತೆ ಮಾತುಕತೆ ನಡೆಸಿರುವ ಯಡಿಯೂರಪ್ಪ ಅವರ ಮನವೊಲಿಸಲು ಯಶಸ್ವಿಯಾಗಿದ್ದಾರೆ.
ಹಾಲಪ್ಪ ಅವರು ಸಾಗರ ಕ್ಷೇತ್ರದಿಂದ ಅಭ್ಯರ್ಥಿಯಾಗುವುದು ಖಚಿತ ಎಂದು ತಿಳಿದುಬಂದಿದೆ. ಇದರಿಂದಾಗಿ ಬೇಳೂರು ಗೋಪಾಲಕೃಷ್ಣ ಅವರ ಮುಂದಿನ ನಡೆ ಏನು? ಎಂಬುದು ಕುತೂಹಲ ಹುಟ್ಟುಹಾಕಿದೆ.

ಕಳೆದ ಗುರುವಾರ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಯಾಗಿದ್ದರು. ಈ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಸುದ್ದಿ ಹಬ್ಬಿತ್ತು.
ಇದರಿಂದಾಗಿ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ಹರತಾಳು ಹಾಲಪ್ಪ ಅಸಮಾಧಾನಗೊಂಡಿದ್ದರು. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸೋಮವಾರ ಹಾಲಪ್ಪ ಅವರು ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ಹಾಲಪ್ಪ, ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, 'ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆ ತೀರ್ಮಾನಕ್ಕೆ ಅವರು ಬದ್ಧರಾಗಿರುವರು ಎಂಬ ವಿಶ್ವಾಸವಿದೆ. ಹಾಲಪ್ಪ ಅವರಿಗೆ ಬೇಸರವಾಗಿದ್ದು ನಿಜ, ಈಗ ಖುಷಿಯಾಗಿದ್ದಾರೆ' ಎಂದರು.












Click it and Unblock the Notifications