ಬೆಂಗಳೂರಿನಲ್ಲಿ ಯುವತಿಗೆ ಕಿರುಕುಳ: ಅಲ್ಲೊಂದು ಇಲ್ಲೊಂದು ಘಟನೆ ಎಂದ ಸಚಿವರ ವಿರುದ್ಧ ವಿಜಯೇಂದ್ರ ಗರಂ
ಬೆಂಗಳೂರು, ಏಪ್ರಿಲ್ 07: ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದ ಯುವತಿಯ ಮೇಲಿನ ದೌರ್ಜನ್ಯ ಘಟನೆಯ ಕುರಿತಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಅಲ್ಲೊಂದು ಇಲ್ಲೊಂದು ಘಟನೆ ಆದಾಗ ಸ್ವಾಭಾವಿಕವಾಗಿ ಜನರ ಗಮನ ಸೆಳೆಯುತ್ತದೆ. ಅಷ್ಟಕ್ಕೇ ನಾವು ಬಿಡೋದಿಲ್ಲ. ನಿರಂತರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಮಳೆ, ಚಳಿ ಅನ್ನದೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಯುವತಿಯ ಮೇಲಿನ ದೌರ್ಜನ್ಯದ ಬಗ್ಗೆ ಗೃಹ ಸಚಿವರು ನೀಡಿರುವ ಈ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಂಡಿಸಿದ್ದು, ತಮ್ಮ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುವುದರಲ್ಲಿ ವಿಶೇಷತೆ ಏನು ಇಲ್ಲ, ಅದನ್ನು ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆ ಇಲ್ಲ ಎನ್ನುವ ರೀತಿಯಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಆಡಳಿತ ಸಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿನ ಯುವತಿಯ ಮೇಲಿನ ದೌರ್ಜನ್ಯ ಘಟನೆಯ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬೇಜವಾಬ್ದಾರಿ ಹೇಳಿಕೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವುದನ್ನು ಸ್ವತಃ ಒಪ್ಪಿಕೊಂಡಂತೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಕೊಲೆ, ಸುಲಿಗೆ, ದರೋಡೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಸರಣಿ ರೂಪದಲ್ಲಿ ವರದಿಯಾಗುತ್ತಲೇ ಇವೆ.
ತಮ್ಮ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುವುದರಲ್ಲಿ ವಿಶೇಷತೆ ಏನು ಇಲ್ಲ, ಅದನ್ನು ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆ ಇಲ್ಲ ಎನ್ನುವ ರೀತಿಯಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಆಡಳಿತ ಸಾಗಿದೆ. ನಡು ರಸ್ತೆಯಲ್ಲಿ ಹೆಣ್ಣು ಮಗಳೊಬ್ಬಳಿಗೆ ಕಿರಾತಕರು ನೀಡುವ ಕಿರುಕುಳವನ್ನು ಮಾಮೂಲಿ ಘಟನೆ ಎಂಬ ರೀತಿಯಲ್ಲಿ ಹೇಳಿರುವ ಗೃಹ ಸಚಿವರ ಮಾತುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆಯನ್ನು ಕುಗ್ಗಿಸುವ ನಡೆಯಾಗಿದೆ. ಗೃಹ ಸಚಿವರ ಈ ಮಾತುಗಳು ಅವರ ಅಸಮರ್ಥತೆ ಮಾತುಗಳನ್ನು ಪ್ರತಿಬಿಂಬಿಸಿದೆ.

ರಾಜ್ಯದಲ್ಲಿ ಗಂಭೀರ ಘಟನೆಗಳು ನಡೆದಾಗಲೆಲ್ಲ ಸಹಜ ಎಂಬಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಕೈ ತೊಳೆದುಕೊಳ್ಳುವ ಗೃಹ ಸಚಿವರು ಬಿಟಿಎಂ ಲೇಔಟ್‌ನ ಘಟನೆಯನ್ನು ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿರುವುದು ನಿಜಕ್ಕೂ ದುರ್ದೈವದ ಸಂಗತಿ. ರಾಜ್ಯದ ಮುಖ್ಯಮಂತ್ರಿಗಳು ಈ ಸಂಬಂಧ ರಾಜ್ಯದ ಕಾನೂನು ವ್ಯವಸ್ಥೆಯ ವೈಫಲ್ಯದ ಕುರಿತು ತಮ್ಮ ನೈತಿಕ ಜವಾಬ್ದಾರಿಯ ಹೇಳಿಕೆ ನೀಡಲಿ. ಕಾನೂನು ಸುವ್ಯವಸ್ಥೆ ಸಮರ್ಥವಾಗಿ ನಿಭಾಯಿಸುವಲ್ಲಿ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗುವವರೆಗೂ ರಾಜ್ಯದ ಜನರಿಗೆ ನೆಮ್ಮದಿ ಇಲ್ಲ ಎನ್ನುವುದು ಗೃಹ ಸಚಿವರ ಹೇಳಿಕೆಯಿಂದ ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.












Click it and Unblock the Notifications