ಉಪ ಚುನಾವಣೆ; ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ!

ಬೆಂಗಳೂರು, ಅಕ್ಟೋಬರ್ 03; ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳ ತಯಾರಿ ಜೋರಾಗಿದ್ದು, ಆರೋಪ-ಪ್ರತ್ಯಾರೋಪಗಳು ಸಹ ಆರಂಭವಾಗಿವೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ.

ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ದುರುದ್ದೇಶದಿಂದಲೇ ಜೆಡಿಎಸ್ ಪಕ್ಷ ಆಯ್ದ ಚುನಾವಣಾ ಕ್ಷೇತ್ರದಲ್ಲಿ‌ ಮಾತ್ರ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆ. ಬಸವಕಲ್ಯಾಣದಲ್ಲಿ ಹೀಗೆಯೇ ಮಾಡಿದ್ದರು, ಈಗ ಸಿಂದಗಿಯಲ್ಲಿಯೂ ಇದನ್ನೇ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.

"ಜೆಡಿಎಸ್ ಪಕ್ಷಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಇದ್ದಿದ್ದರೆ ಹಾಸನ, ಮೈಸೂರು, ಮಂಡ್ಯ ಭಾಗದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಬಹುದಲ್ಲವೇ?. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಯಾರಾದರೂ ಮುಸ್ಲಿಮರನ್ನು ಮಂತ್ರಿ ಮಾಡಿದ್ದಾರಾ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

 Hanagal and Sindagi by elections Siddaramaiah Question To Kumaraswamy

"ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದಿಂದ ಇಬ್ಬರು ಪ್ರಬಲ ಅಭ್ಯರ್ಥಿಗಳಿದ್ದಾರೆ. ಯಾರಿಗೇ ಪಕ್ಷದ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುವಂತೆ ಈ ಇಬ್ಬರಿಗೂ ಹೇಳಿದ್ದೇವೆ. ಅದಕ್ಕವರು ಒಪ್ಪಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ 2-3 ದಿನಗಳಲ್ಲಿ ಪಕ್ಷವು ಅಭ್ಯರ್ಥಿಯನ್ನು ಘೋಷಿಸಲಿದೆ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

"ಸಿಂಧಗಿ ಕ್ಷೇತ್ರದ ಉಪಚುನಾವಣೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾ ಮುಖಂಡರು, ಆ ಭಾಗದ ಶಾಸಕರ ಜೊತೆ ಚರ್ಚೆ ನಡೆಸಲಾಗಿದೆ. ಅಶೋಕ್ ಮನಗೂಳಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಹೈಕಮಾಂಡ್ ಈಗಾಗಲೇ ಘೋಷಣೆಯನ್ನು ಮಾಡಿದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಾನಗಲ್‌ನಲ್ಲಿಅಕ್ಟೋಬರ್ 7ರಂದು ಮತ್ತು ಸಿಂಧಗಿಯಲ್ಲಿ 8ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅಭ್ಯರ್ಥಿಗಳ ಜೊತೆ ಇರಲಿದ್ದಾರೆ.

ಎರಡೂ ಕಡೆ ಮುಸ್ಲಿಂ ಅಭ್ಯರ್ಥಿ; ಜೆಡಿಎಸ್ ಪಕ್ಷ ಹಾನಗಲ್ ಮತ್ತು ಸಿಂಧಗಿ ಎರಡೂ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದೆ. ಸಿಂಧಗಿಯಲ್ಲಿ ನಾಜಿಯಾ ಶಕೀಲಾ ಅಂಗಡಿ ಅಭ್ಯರ್ಥಿ. ಹಾನಗಲ್‌ನಲ್ಲಿ ನಿಯಾಜ್ ಶೇಕ್ ಅಭ್ಯರ್ಥಿಯಾಗಿದ್ದಾರೆ.

2018ರಲ್ಲಿ ಸಿಂಧಗಿಯಲ್ಲಿ ಜೆಡಿಎಸ್‌ನ ಎಂ. ಸಿ. ಮನಗೂಳಿ ಗೆದ್ದಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಎಂ. ಸಿ. ಮನಗೂಳಿ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಸೇರಿದ್ದು, ಅವರೇ ಉಪ ಚುನಾವಣೆ ಅಭ್ಯರ್ಥಿಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಘೋಷಿಸಿಲ್ಲ; ಸಿ. ಎಂ. ಉದಾಸಿ ನಿಧನದಿಂದ ತೆರವಾದ ಹಾನಗಲ್ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಅಕ್ಟೋಬರ್ 8ರ ತನಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶವಿದೆ. ಬಿಜೆಪಿ ಎರಡೂ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.

ಭಾನುವಾರ ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳಿಸಲಾಗುತ್ತದೆ. ಸೋಮವಾರ ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆ ಇದೆ.

ಸಿ. ಎಂ. ಉದಾಸಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂಬುದು ಒತ್ತಾಯವಾಗಿದೆ. ಸಿ. ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿ ಸಂಸದರು. ಆದ್ದರಿಂದ ಶಿವಕುಮಾರ್ ಉದಾಸಿ ಪತ್ನಿ ರೇವತಿಗೆ ಟಿಕೆಟ್ ಸಿಗಬಹುದು ಎಂಬ ಲೆಕ್ಕಾಚಾರವಿದೆ.

ಮಾಜಿ ಎಂಎಲ್‌ಸಿ ಶಿವರಾಜ್ ಸಜ್ಜನ್, ಕಲ್ಯಾಣ್ ಶೆಟ್ಟರ್ ಸೇರಿದಂತೆ ಇನ್ನೂ ನಾಲ್ವರು ಆಕಾಂಕ್ಷಿಗಳ ಹೆಸರು ಟಿಕೆಟ್ ರೇಸ್‌ನಲ್ಲಿ ಕೇಳಿ ಬರುತ್ತಿದೆ. ಹಾನಗಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದ ಪಕ್ಕದ ಕ್ಷೇತ್ರವಾಗಿದೆ. ಆದ್ದರಿಂದ ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಪಕ್ಷಕ್ಕೆ ಸಹ ಹಾನಗಲ್ ಅಭ್ಯರ್ಥಿ ಅಂತಿಮಗೊಳಿಸುವುದು ಸವಾಲಾಗಿದೆ. ಶ್ರೀನಿವಾಸ ಮಾನೆ ಮತ್ತು ಮನೋಹರ ತಹಶೀಲ್ದಾರ್ ನಡುವೆ ಕ್ಷೇತ್ರದ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಶ್ರೀನಿವಾಸ ಮಾನೆ ಪರವಾಗಿ ಮತ್ತು ಡಿ. ಕೆ. ಶಿವಕುಮಾರ್ ಮನೋಹರ ತಹಶೀಲ್ದಾರ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದು ಸುದ್ದಿ. ಶುಕ್ರವಾರ ಸಿದ್ದರಾಮಯ್ಯರನ್ನು ಡಿ. ಕೆ. ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+