ಮುಂದಿನ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಬರ್ತಾರೋ ಬರಲ್ವೋ?- ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು, ಫೆಬ್ರವರಿ 16: ಸಿಎಂ ಸಿದ್ದರಾಮಯ್ಯ ಈ ಬಾರಿ 3,71, 383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದು, ಮುಂದಿನ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಬರ್ತಾರೋ ಬರಲ್ವೋ? ಎಂದು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಮಯ್ಯ 15ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಮುಂದಿನ ಬಜೆಟ್ ಮಂಡಿಸಲು ಬರ್ತಾರೋ ಬರಲ್ವೋ? ಇದು ಲೂಟಿ, ದರೋಡೆಕೋರ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಬಹಳಷ್ಟು ಅನುಭವ ಇರುವ ಆರ್ಥಿಕ ತಜ್ಞರು. ಆದರೆ ಕಳೆದ 10 ತಿಂಗಳಲ್ಲಿ ತಪ್ಪು ಮಾಡಿದ್ದೇವೆ ಎಂಬ ಭಾವನೆಗೆ ಬಂದಿದ್ದಾರೆ. ಮೊನ್ನೆ ವಿನಾಶ ಕಾಲ ಅಂತ ಮುಖ್ಯಮಂತ್ರಿ ಹೇಳಿದ್ದರು. ಬಹುಶಃ ನಮ್ಮ ರಾಜ್ಯವನ್ನು ವಿನಾಶ ಕಾಲಕ್ಕೆ ಬುನಾದಿ ಹಾಕಿದ್ದೇನೆ ಎಂಬ ಸಂದೇಶ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಒಂದು ಕಡೆ ಕೇಂದ್ರ ಸರ್ಕಾರವನ್ನು ನಿಂದನೆ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಅವರು ನಾನು ಹೇಳಿದ್ದೇ ಸತ್ಯ ಅಂತ ಹೇಳಿ, ಒಂದು ಸುಳ್ಳು ಹೇಳಿ ಅದನ್ನ ಸತ್ಯ ಅಂತ ಹೇಳುತ್ತಿದ್ದಾರೆ. ನಾನು ಕೇಂದ್ರ ಸರ್ಕಾರ, ಬಿಜೆಪಿ ಸರ್ಕಾರದ ಮೇಲೆ ಆಕ್ರೋಶ ಇದೆ ಅಂದುಕೊಂಡಿದ್ದೆ. ನಮ್ಮ ಮೇಲೂ ಆಕ್ರೋಶ ಇದೆ ಅಂದುಕೊಂಡಿದ್ದೆ. ಆದರೆ ರಾಜ್ಯದ ಏಳು ಕೋಟಿ ಜನರ ಮೇಲೆ ಆಕ್ರೋಶ ಇದೆ ಅಂತ ಅನಿಸುತ್ತದೆ ಎಂದರು.
ಇದು ಬಜೆಟ್ ಮೇಲಿರುವ ನನ್ನ ಅಭಿಪ್ರಾಯ. ನಿಮ್ಮ ಹಣೆಬರಹ ಜನ ನೋಡುತ್ತಿದ್ದಾರೆ. ಉದ್ಧಟತನ, ದುರಂಕಾರ ಬಿಡಿ, ನಿಮ್ಮ ಬಲಿ ಪಡೆಯುವ ದಿನ ದೂರ ಇಲ್ಲ. ರಾಜ್ಯವನ್ನು ಸರ್ವನಾಶದ ಕಡೆ ತೆಗೆದುಕೊಂಡು ಹೋಗುತ್ತಿದ್ದೀರಿ. ಬಿಜೆಪಿ ಸರ್ಕಾರದ ಬಜೆಟ್ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೂ ಇಟ್ಟುಕೊಂಡು ಬಂದಿದ್ದರು. ಅವರ ಕಿವಿಯಿಂದ ಹೂ ತೆಗೆದು ಜನರಿಗೆ ಇಡಲು ಹೋಗುತ್ತಿದ್ದಾರೆ. ಇದು ನಾಳೆ ಬಾ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications