H.D.Kumaraswamy: ಅಭಿಮಾನಿಗಳಿಗೆ ಕಹಿಸುದ್ದಿ ಕೊಟ್ಟ ಎಚ್.ಡಿ.ಕುಮಾರಸ್ವಾಮಿ, ಏನದು?
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಕಹಿಸುದ್ದಿ ನೀಡಿದ್ದಾರೆ. ಇನ್ನೇನು ಎರಡೇ ದಿನಗಳಲ್ಲಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆ ಅದ್ಧೂರಿಯಾಗಿ ಆಚರಿಸಬೇಕು ಎಂದು ಹಲವರು ಸಿದ್ಧತೆ ಮಾಡಿಕೊಂಡಿದ್ದರು.
ಮಂಡ್ಯದಲ್ಲೂ ಕುಮಾರಸ್ವಾಮಿ ಅವರ ಜನ್ಮದಿನದ ಹಿನ್ನೆಲೆ ಬೃಹತ್ ಸಮಾವೇಶ ಕೂಡ ಆಯೋಜಿಸಿ, ಸದ್ಯಕ್ಕೆ ಮುಂದೂಡಲಾಗಿತ್ತು. ಆದರೆ ಮತ್ತೆ ಈ ಕಾರ್ಯಕ್ರಮ ಅದ್ಧೂರಿಯಾಗಿಯೇ ನಡೆಯಲಿದೆ ಎಂದು ಜೆಡಿಎಸ್ ನಾಯಕರು ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ಎಲ್ಲರಿಗೂ ಶಾಕ್ ನೀಡಿದ್ದಾರೆ.

ಈ ಬಾರಿ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಅವರು ಬ್ರೇಕ್ ಹಾಕಿದ್ದಾರೆ. ಈ ವಿಚಾರವನ್ನು ಖುದ್ದು ಕುಮಾರಸ್ವಾಮಿ ಅವರು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನೆಲ್ಲಾ ನೆಚ್ಚಿನ ಕಾರ್ಯಕರ್ತ ಬಂಧುಗಳಲ್ಲಿ ನನ್ನ ಮನವಿ. ಡಿಸೆಂಬರ್ 16ರಂದು ನನ್ನ ಜನ್ಮದಿನ. ಪ್ರತೀ ವರ್ಷ ನೀವೆಲ್ಲ ಬಹಳ ಅರ್ಥಪೂರ್ಣವಾಗಿ ನನ್ನ ಹುಟ್ಟುಹಬ್ಬ ಆಚರಿಸುತ್ತಾ ನನ್ನ ಬದುಕಿಗೆ ಸಾರ್ಥಕತೆ ತಂದು ಕೊಟ್ಟಿದ್ದೀರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜಕೀಯವಾಗಿ ನನ್ನ ಯಶಸ್ಸಿಗೆ ಮೂಲ ಆಧಾರಸ್ತಂಭವೇ ತಾವುಗಳು. ಆ ಕೃತಜ್ಞತಾ ಭಾವದಿಂದ ನಿಮ್ಮಲ್ಲಿ ನನ್ನದೊಂದು ವಿನಮ್ರ ಕಳಕಳಿಯ ಮನವಿ ಎಂದಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿದೆ. ಹೀಗಾಗಿ ನಾನು ನವದೆಹಲಿಯಲ್ಲೇ ಉಳಿಯಬೇಕಾಗಿದೆ. ಅಲ್ಲದೆ ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ವಿಜೃಂಭಣೆಯ ಹುಟ್ಟುಹಬ್ಬ ಬೇಡ ಎನ್ನುವುದು ನನ್ನ ಅಭಿಪ್ರಾಯ ಎಂದು ಅವರು ತಿಳಿಸಿದ್ದಾರೆ.

ತಾವುಗಳು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಅಷ್ಟು ಸಾಕು ನನಗೆ. ಸಾಧ್ಯವಾದರೆ ಸಮಾಜಕ್ಕೆ, ದುರ್ಬಲ ಜನರಿಗೆ ಏನಾದರೂ ಸಹಾಯ ಮಾಡಿ. ಜನಸೇವೆ ಜಾತ್ಯತೀತ ಜನತಾದಳ ಪಕ್ಷದ ಮೂಲತತ್ತ್ವ. ಅದೇ ನನಗೆ ತಾವು ಕೊಡುವ ಉಡುಗೊರೆ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಅವರು ಹುಟ್ಟುಹಬ್ಬದ ಆಚರಣೆಗೆ ಕರ್ನಾಟಕದಲ್ಲಿ ಲಭ್ಯ ಇರುವುದಿಲ್ಲ ಎಂದು ಬೇಸರದ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷವು ಸಾಲು ಸಾಲಾಗಿ ಸಮಾವೇಶಗಳನ್ನು ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಿತ್ತು. ಇದಕ್ಕೆ ಟಕ್ಕರ್ ಕೊಡಲು ಜೆಡಿಎಸ್ ಕೂಡ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಹಾಗೂ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಮಂಡ್ಯದಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಆದರೆ, ಆ ಕಾರ್ಯಕ್ರಮವನ್ನು ದಿಢೀರ್ ಮುಂದೂಡಲಾಗಿತ್ತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನದ ಅಂಗವಾಗಿ ಮಂಡ್ಯದಲ್ಲಿ ಇದೇ ಡಿಸೆಂಬರ್ 15ರಂದು (ನಾಳೆ) ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಮುಂದೂಡಲಾಗಿತ್ತು. ಮಂಡ್ಯ ನಗರದಲ್ಲಿ ಡಿಸೆಂಬರ್ 20ರಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಕಾರಣ ಈ ಸಮಾವೇಶವನ್ನು ಮುಂಡೂಡಿರುವುದಾಗಿ ಜೆಡಿಎಸ್ ನಾಯಕರು ಹೇಳಿದ್ದರು. ಸಾಹಿತ್ಯ ಸಮ್ಮೇಳನದ ಅವಧಿಯಲ್ಲಿ ಅಭಿನಂದನಾ ಸಮಾರಂಭ ನಡೆಸುವುದು ಒಳ್ಳೆಯದಲ್ಲ, ಹಾಗಾಗಿ ಈ ಅಭಿನಂದನಾ ಕಾರ್ಯಕ್ರಮವನ್ನು ಮುಂದೂಡುವಂತೆ ಎಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದ ಹಿನ್ನೆಲೆ ಈ ಕಾರ್ಯಕ್ರಮ ಮುಂದೂಡಲಾಗಿತ್ತು.












Click it and Unblock the Notifications