ಗ್ಯಾರಂಟಿ ಯೋಜನೆ ಸಮರ್ಥಿಸಿ ಹೈಕೋರ್ಟ್‌ಗೆ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು, ಸೆಪ್ಟೆಂಬರ್ 22; ಕರ್ನಾಟಕ ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ನೀಡಿತ್ತು. ಈ ಗ್ಯಾರಂಟಿ ಘೋಷಣೆಗಳ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಅವಕಾಶ ವಂಚಿತ ವರ್ಗಗಳ ಕಲ್ಯಾಣಕ್ಕೆ ಜಾರಿಗೆ ತರಲಾಗಿರುವ 5 ಗ್ಯಾರಂಟಿ ಯೋಜನೆಗಳು ಸಂವಿಧಾನ ಮತ್ತು ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅದೇ ಆಧಾರದ ಮೇಲೆ ತಮ್ಮ ಹಾಗೂ ಇತರ ಶಾಸಕರ ಮೇಲೆ ಹೂಡಿರುವ ಚುನಾವಣಾ ತಕರಾರು ಅರ್ಜಿಗಳನ್ನು ವಜಾಗೊಳಿಸುವಂತೆ ಕೋರಿದ್ದಾರೆ.

ಗ್ಯಾರಂಟಿಗಳ ಹೆಸರಲ್ಲಿ ಮತದಾರರಿಗೆ ಆಮಿಷವೊಡುವ ಮೂಲಕ ಚುನಾವಣಾ ಅಕ್ರಮ ಎಸಗಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ವರುಣಾ ಹೋಬಳಿಯ ಕೂಡನಹಳ್ಳಿಯ ಕೆ. ಎಂ. ಶಂಕರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ಲಿಖಿತ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಅವರು ಗ್ಯಾರಂಟಿ ಘೋಷಣೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಈ ಅರ್ಜಿಯು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಖಿತ ಹೇಳಿಕೆಯನ್ನು ದಾಖಲೆಗೆ ತೆಗೆದುಕೊಂಡ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿತು.
ಲಿಖಿತ ಹೇಳಿಕೆ ವಿವರಗಳು: ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಚುನಾವಣಾ ಅಕ್ರಮ ನಡೆಸಲಾಗಿದೆ ಎಂಬ ಅರ್ಜಿದಾರರ ಆರೋಪ ಸಂಪೂರ್ಣ ಸುಳ್ಳು. ಅರ್ಜಿದಾರರ ಈ ವಾದವು ಪ್ರಜಾಪ್ರತಿನಿಧಿ ಕಾಯ್ದೆಯ ತತ್ವಗಳಿಗೆ ವಿರುದ್ಧವಾಗಿದೆ. ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೆ, ನನ್ನ ವಿರುದ್ಧವಲ್ಲದೇ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರ ವಿರುದ್ಧ ಇದೇ ರೀತಿಯ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಗೆ ಯೋಗ್ಯವಲ್ಲದ, ಸೂಕ್ತ ಕಾನೂನು ತಿಳುವಳಿಕೆ ಇಲ್ಲದ, ಕೇವಲ ಕ್ಷುಲ್ಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಸಲ್ಲಿಸಲಾಗಿರುವ ಇಂತಹ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾಾರೆ.
ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಈ 5 ಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯ ಕೋಟ್ಯಾಂತರ ಕುಟುಂಬಗಳ ಶ್ರೇಯೋಭಿವೃದ್ಧಿಗೆ ರೂಪಿಸಲಾಗಿದೆ. ರಾಜ್ಯದ ನಾಗರಿಕರ ಹಾಗೂ ವಿಶೇಷವಾಗಿ ಮಹಿಳೆಯರ ಸಬಲೀಕರಣ ಮತ್ತು ಉನ್ನತೀಕರಣದ ವಿಶಾಲ ಧ್ಯೇಯದೊಂದಿಗೆ ಗ್ಯಾರಂಟಿ ಯೋಜನೆಗಳನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ.
ಇದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವಾಗಿದೆ. ಚುನಾವಣಾ ಪ್ರಣಾಳಿಕೆಯ ಮಹತ್ವನ್ನು ಎಸ್. ಆರ್. ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 1994ರಲ್ಲಿ ಸುಪ್ರೀಂಕೋರ್ಟ್ ಪುನರುಚ್ಛರಿಸಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಚುನಾವಣಾ ಪ್ರಣಾಳಿಕೆಯಲ್ಲಿನ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ವಿವರಿಸಿದ್ದಾರೆ.












Click it and Unblock the Notifications