ಗೃಹಜ್ಯೋತಿ; ಜೂ. 18ರಿಂದ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?
ಬೆಂಗಳೂರು, ಜೂನ್ 15; ಕರ್ನಾಟಕ ಕಾಂಗ್ರೆಸ್ ವಿಧಾನಸಭೆ ಚುನಾವಣೆ ಸಮಯದಲ್ಲಿ ನೀಡಿದ 5 ಗ್ಯಾರಂಟಿಗಳಲ್ಲಿ 'ಗೃಹಜ್ಯೋತಿ' ಯೋಜನೆ ಸಹ ಒಂದು. ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆ ಇದಾಗಿದೆ. ಯೋಜನೆ ಫಲಾನುಭವಿಯಾಗಲು ಜೂನ್ 18 ರಿಂದ ಅರ್ಜಿ ಸಲ್ಲಿಸಬಹುದು.
ಪತ್ರಿಕಾ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಲಾಗಿದೆ. 'ಗೃಹಜ್ಯೋತಿ' ಯೋಜನೆಯಡಿ ಫಲಾನುಭವಿಗಳ ನೋಂದಣಿಯನ್ನು ಜೂನ್ ತಿಂಗಳ 18ರಿಂದ ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಯೋಜನೆಯ ಲಾಭ ಪಡೆಯಲಿಚ್ಛಿಸುವ ಫಲಾನುಭವಿಗಳು ಸೇವಾ ಸಿಂಧು ರ್ಪೋಟಲ್‌ನಲ್ಲಿ (https://sevasindhugs.karnataka.gov.in) ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸದರಿ ವೆಬ್‌ಸೈಟ್ ಮೊಬೈಲ್ ಫೋನ್/ ಡೆಸ್ಕ್‌ಟಾಪ್/ ಲ್ಯಾಪ್ ಟ್ಯಾಪ್‌ಗಳಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಿದೆ.

ದಾಖಲೆಗಳು; 'ಗೃಹ ಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್‌ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ.
ಅರ್ಜಿಗಳನ್ನು ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಸಲ್ಲಿಕೆ ಮಾಡಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಛೇರಿ ಅಥವಾ 24x7 ಸಹಾಯವಾಣಿ 1912ಗೆ ಕರೆಮಾಡಬಹುದಾಗಿದೆ.
'ಗೃಹಜ್ಯೋತಿ' ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯಡಿ ರಾಜ್ಯದಲ್ಲಿನ ಪತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುತ್ತಾರೆ.
ಈ ಯೋಜನೆಯು ರಾಜ್ಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮವಾಗಿದ್ದು, ಇದರಿಂದ ರಾಜ್ಯದ 2 ಕೋಟಿ ಗೃಹ ಬಳಕೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಈ ಯೋಜನೆಯು 2023ರ ಆಗಸ್ಟ್ 1 (ಜುಲೈ ಮಾಹೆಯ ವಿದ್ಯುಚ್ಛಕ್ತಿ ಬಳಕೆ) ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ.
ಸರ್ಕಾರ 'ಗೃಹಜ್ಯೋತಿ' ಯೋಜನೆಯ ಆದೇಶ ಹೊರಡಿಸುವಾಗ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ/ ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯಡಿಯ ಫಲಾನುಭವಿಗಳನ್ನು ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿತ್ತು.
ಈಗಾಗಲೇ ಸರ್ಕಾರ 'ಗೃಹಜ್ಯೋತಿ' ಯೋಜನೆಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಷರತ್ತುಗಳ ಅನ್ವಯ ಉಚಿತ ವಿದ್ಯುತ್ ನೀಡಲಾಗುತ್ತದೆ. ಆಗಸ್ಟ್ 2023ರ ತಿಂಗಳಿಂದ ನೀಡುವ ಬಿಲ್‌ಗಳಿಗೆ ಅನ್ವಯವಾಗುವಂತೆ ಷರತ್ತುಗಳೊಂದಿಗೆ ಯೋಜನೆ ಜಾರಿಗೆ ಬರಲಿದೆ. ಗ್ರಾಹಕರು ಈ ಹಿಂದೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಬಿಲ್‌ಗಳನ್ನು ಪಾವತಿ ಮಾಡಿದರೆ ಮಾತ್ರ ಯೋಜನೆಗೆ ಅರ್ಹರಾಗುತ್ತಾರೆ.
'ಗೃಹಜ್ಯೋತಿ' ಷರತ್ತುಗಳು
* 'ಗೃಹಜ್ಯೋತಿ' ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
* ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ಅನ್ನು ನಮೂದಿಸುವುದು.
* ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡುವುದು ಹಾಗೂ ಗ್ರಾಹಕರು net bill ಅನ್ನು ಪಾವತಿಸುವುದು.
* ಅರ್ಹ ಯೂನಿಟ್/ ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ಅನ್ನು ನೀಡಲಾಗುವುದು.
* ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
* ಪ್ರತಿ ಫಲಾನುಭವಿಯು ತನ್ನ Customer ID/ Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು.
* ದಿನಾಂಕ 30/06/2023ರ ಅಂತ್ಯಕ್ಕೆ (ಜೂನ್ 2023ರ ಮಾಹೆಯಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ 2023ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದ್ದು, ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತದೆ.
* ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
* ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ (ಮೀಟರ್), ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರು.












Click it and Unblock the Notifications