'ಗ್ರೇಟರ್ ತುಮಕೂರು ಪ್ರಾಧಿಕಾರ': ಜಿಲ್ಲೆಗೆ ಗುಡ್ ನ್ಯೂಸ್ ಕೊಟ್ಟ ಜಿ.ಪರಮೇಶ್ವರ್
ತುಮಕೂರು, ಡಿಸೆಂಬರ್ 15: ಗ್ರೇಟರ್ ತುಮಕೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಬೆಂಗಳೂರು ಮಾದರಿಯಲ್ಲಿ ತುಮಕೂರು ಪಾಲಿಕೆ ಬದಲಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗು ಗೃಹ ಸಚಿವ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಅವರು ಹೇಳಿದರು.
ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ನಾಗರಿಕರಿಗೆ ಇ-ಖಾತಾ (ನಮೂನೆ-2) ವಿತರಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಗರದ ವಿವಿಧ ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಡಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಸೌಲಭ್ಯಗಳನ್ನು ವಿತರಿಸಿದೆ.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ್ ಅವರು, ಈಗಾಗಲೇ ಬೆಂಗಳೂರಲ್ಲಿ ಬಿಬಿಎಂಪಿಯನ್ನು ಐದು ಮಹಾನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ತುಮಕೂರಿನ ಹತ್ತಿರದ ವರೆಗೂ ಬೆಂಗಳೂರು ಬೆಳೆದಿದೆ ಅದೇ ರೀತಿಯಾಗಿ ಗ್ರೇಟರ್ ತುಮಕೂರು ಮಾಡಲು ಮುಂದಾಗಿದ್ದೇವೆ. ಸದ್ಯದಲ್ಲೇ ಈ ವಿಚಾರವಾಗಿ ತೀರ್ಮಾನ ಆಗಲಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರು ತುಮಕೂರಿನಲ್ಲಿ ತಿಳಿಸಿದರು.
ಗ್ರೇಟರ್ ತುಮಕೂರು ಘೋಷಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಗ್ರೇಟರ್ ತುಮಕೂರು ಘೋಷಣೆಯಿಂದ ನಗರಕ್ಕೆ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೊಳ್ಳುತ್ತದೆ. ಕೈಗಾರಿಕೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಯೋಜಿತ ನಗರ ಅಭಿವೃದ್ಧಿ ಹೊಂದಿ ಜನರ ಜೀವನಮಟ್ಟ ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ತುಮಕೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳು ಬಹಳ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಿಂದ ಜನರು ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಗ್ರಾಮಗಳಲ್ಲಿ ಜೀವನ ಸಾಗಿಸಲು ಎದುರಾಗುವ ಸಮಸ್ಯೆಗಳ ಕಾರಣದಿಂದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ನಗರಗಳಲ್ಲಿ ಬದುಕು ಸಹ ಸುಲಭವಲ್ಲ. ಕೆಲ ವಾರ್ಡ್‌ಗಳಲ್ಲಿ ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಶೇ.40ರಷ್ಟು ಜನರು ಪಟ್ಟಣಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ವಲಸೆ ಬಂದು ಜೀವನ ಸಾಗಿಸುವವರಿಗೆ ಸರಕಾರದಿಂದ ವಸತಿ ಸೌಲಭ್ಯ ಸ್ಮಶಾನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಕೈಗಾರಿಕೆ ಹಾಗೂ ಕೃಷಿ ಅಭಿವೃದ್ಧಿಯಾದಾಗ ಜನಸಾಮಾನ್ಯರ ಜೀವನ ಮಟ್ಟ ಬದಲಾಗುತ್ತದೆ ಎಂದು ಹೇಳಿದರು.












Click it and Unblock the Notifications