ಸಿಂಧನೂರು; ಕಾಂಗ್ರೆಸ್ ಟಿಕೆಟ್‌ಗೆ ತಾತ, ಮೊಮ್ಮಗನ ಪೈಪೋಟಿ!
ಬೆಂಗಳೂರು, ಅಕ್ಟೋಬರ್ 11; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಹಲವು ಕ್ಷೇತ್ರಗಳಲ್ಲಿ ಬಹಳ ಪೈಪೋಟಿ ಇದೆ. ಸಿಂಧನೂರು ಕ್ಷೇತ್ರವೂ ಇಂತಹ ಪೈಪೋಟಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬುದನ್ನು ಎರಡು ಮಾತಿಲ್ಲ. ಆದರೆ ಈ ಇಬ್ಬರು ನಾಯಕರ ಬೆಂಬಲಿಗರೇ ಈಗ ಪೈಪೋಟಿಗೆ ಇಳಿದಿದ್ದಾರೆ.
ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ನಂಬಿ ಬೇರೆ ಪಕ್ಷಗಳ ಅನೇಕ ನಾಯಕರು ಪಕ್ಷಕ್ಕೆ ಬಂದಿದ್ದಾರೆ. ಇನ್ನೂ ಹಾಲಿ, ಮಾಜಿ ಶಾಸಕರು ಆಗಮಿಸಿದ್ದಾರೆ ಎಂಬ ಸುದ್ದಿಗಳಿವೆ. ಆದರೆ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದೇ ವಿಚಾರ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಜಟಾಪಟಿಗೆ ಕಾರಣವಾದರು ಅಚ್ಚರಿ ಇಲ್ಲ.
ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ ನಡೆಯುತ್ತಿದೆ. ಕ್ಷೇತ್ರ ಸದ್ಯ ಜೆಡಿಎಸ್ ವಶದಲ್ಲಿದೆ. ಆದರೆ 1597 ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದರು. ಆದ್ದರಿಂದ ಈ ಬಾರಿ 'ಕೈ' ಟಿಕೆಟ್‌ಗೆ ಬೇಡಿಕೆ ಹೆಚ್ಚಿದೆ.

ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್
ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಬಸನಗೌಡ ಬಾದರ್ಲಿ ನಡುವೆ ಪೈಪೋಟಿ ಇದೆ. ಅಚ್ಚರಿ ಎಂದರೆ ಇಬ್ಬರು ತಾತ, ಮೊಮ್ಮಕ್ಕಳು.
ಹಂಪನಗೌಡ ಬಾದರ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು. ಬಸನಗೌಡ ಬಾದರ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ 1597 ಮತಗಳ ಅಂತರದಿಂದ ಸೋತ ಹಂಪನಗೌಡ ಬಾದರ್ಲಿ ಈ ಬಾರಿ ಟಿಕೆಟ್ ಪಡೆದು ಗೆಲುವು ಸಾಧಿಸಬೇಕು ಎಂಬ ಗುರಿ ಹೊಂದಿದ್ದಾರೆ.

69 ಸಾವಿರ ಮತಗಳನ್ನು ಪಡೆದಿದ್ದರು
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಂಪನಗೌಡ ಬಾದರ್ಲಿ 69,917 ಮತಗಳನ್ನು ಪಡೆದು ಸೋಲು ಕಂಡಿದ್ದರು. ಜೆಡಿಎಸ್‌ನ ವೆಂಕಟರಾವ್ ನಾಡಗೌಡ (71,514) ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಹಂಪನಗೌಡ ಬಾದರ್ಲಿ ಮುಂದಿನ ಚುನಾವಣೆ ಟಿಕೆಟ್‌ಗಾಗಿ ಈಗಾಗಲೇ ಪ್ರಯತ್ನ ನಡೆಸಿದ್ದಾರೆ. ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಾ ಅಭಿಮಾನಿಗಳು, ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಕಳೆದ ಬಾರಿ ರೈತರನ್ನು, ಕಾಲುವೆ ನೀರಿನ ವಿಚಾರವನ್ನು ಕಡೆಗಣಿಸಿದ್ದು ಸೋಲಿಗೆ ಕಾರಣವಾಯಿತು ಎಂಬುದನ್ನು ಮನಗಂಡು ಈ ಬಾರಿ ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ.

ಟಿಕೆಟ್‌ಗಾಗಿ ಬಸನಗೌಡ ಬಾದರ್ಲಿ ಪ್ರಯತ್ನ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತರಾಗಿರುವ ಬಸನಗೌಡ ಬಾದರ್ಲಿ ಸಹ ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಹಂಪನಗೌಡ ಬಾದರ್ಲಿ ಮೊಮ್ಮಗನಾಗಿರುವ ಬಸನಗೌಡ ಬಾದರ್ಲಿ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಸಮಾಜ ಸೇವಾ ಕಾರ್ಯಗಳ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ.
ಒಂದೇ ಕ್ಷೇತ್ರದ ಒಂದೇ ಪಕ್ಷದ ಟಿಕೆಟ್‌ಗಾಗಿ ತಾತ, ಮೊಮ್ಮಗನ ಪ್ರಯತ್ನ ಸ್ಥಳೀಯ ಕಾಂಗ್ರೆಸ್ ನಾಯಕರ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂದು ನಾಯಕರು, ಮುಖಂಡರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಶಕ್ತಿ ಪ್ರದರ್ಶನ
ಕೆಲವು ದಿನಗಳ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ರಾಯಚೂರು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಬಸನಗೌಡ ಬಾದರ್ಲಿಗೆ ಅವಮಾನ ಮಾಡಲಾಗಿದೆ ಎಂಬುದು ಆರೋಪ. ಹೀಗಾಗಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಅವರು ಬಯಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 22, 23ರಂದು ರಾಯಚೂರಿನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಶಕ್ತಿ ಪ್ರದರ್ಶನ ಮಾಡಲು ಬಸನಗೌಡ ಬಾದರ್ಲಿ ಮುಂದಾಗಿದ್ದಾರೆ.












Click it and Unblock the Notifications