Gram Panchayat: ಪಿಡಿಒಗಳ ವರ್ಗಾವಣೆ ನಿಯಮಗಳು, ವಿವರ
ಬೆಂಗಳೂರು, ಜುಲೈ 08: ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ನೌಕರರನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ಅನುಮೋದನೆ ನೀಡಿತ್ತು. ಈಗ ಪಿಡಿಒ ಸೇರಿ ಇತರ ನೌಕರರ ವರ್ಗಾಗಣೆ ಕರಡು ನಿಯಮ ರೂಪಿಸಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆ ಅಡಿಯಲ್ಲಿರುವ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗೆ ನೂತನ ನಿಯಮ ರೂಪಿಸಲಾಗಿದೆ.

ಈ ನಿಯಮಗಳ ಬಗ್ಗೆ ಆಕ್ಷೇಪಣೆಗಳಿದ್ದರೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿ ಕಟ್ಟಡ, ಡಾ. ಬಿ. ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಕೆ ಮಾಡಬಹುದು.
ಕರಡು ನಿಯಮಗಳ ವಿವರ: ಸರ್ಕಾರ ಪ್ರಕಟಿಸಿರುವ ಕರಡು ನಿಯಮಗಳ ಅನ್ವಯ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳ ವರ್ಗಾವಣೆ ಏಪ್ರಿಲ್/ ಮೇ ತಿಂಗಳೊಳಗೆ ನಡೆಯಬೇಕು. ಒಟ್ಟು ವರ್ಗಾವಣೆ ಶೇ 15ರಷ್ಟಿರಬೇಕು, ಈ ಪೈಕಿ ಶೇ 9ರಷ್ಟು ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆ, ಉಳಿದ ಶೇ 6 ಕೋರಿಕೆಯ ವರ್ಗಾವಣೆ ಆಗಬೇಕು.
ಗ್ರಾಮ ಪಂಚಾಯಿತಿ ನೌಕರ ನಿರಂತರವಾಗಿ 3 ವರ್ಷಗಳಿಗಿಂತ ಕಡಿಮೆ ಇಲ್ಲದ ಸೇವೆಯನ್ನು ಹೊಂದಿದ್ದಲ್ಲಿ ಆತನ ಸೇವಾವಧಿ ಆಧಾರದ ಮೇಲೆ ಕೋರಿಕೆ ಅಥವಾ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತೊಂದು ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಬಹುದು ಎಂದು ನಿಯಮ ರೂಪಿಸಲಾಗಿದೆ.
ಒಬ್ಬ ನೌಕರ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದಲ್ಲಿ ಸೇವಾವಧಿ ಆಧಾರದ ಮೇಲೆ ವರ್ಗಾವಣೆ ಮಾಡಬಹುದು. ಇಲಾಖಾ ವಿಚಾರಣೆ/ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ನೌಕರನನ್ನುಇಲಾಖಾ ವಿಚಾರಣೆ/ ಕ್ರಿಮಿನಲ್ ಪ್ರಕ್ರಿಯೆಗಳು ನಡೆದ ಸ್ಥಳಕ್ಕೆ ನಿಯುಕ್ತ ಮಾಡಬಾರದು ಎಂದು ನಿಯಮ ಹೇಳುತ್ತದೆ.
ವಿನಾಯಿತಿ ಯಾರಿಗೆ?; ಗ್ರಾಮ ಪಂಚಾಯಿತಿ ನೌಕರರ ವರ್ಗಾವಣೆಯಲ್ಲಿ ಕೆಲವು ವಿನಾಯಿತಿಗಳನ್ನು ಸಹ ನೀಡಲಾಗಿದೆ. ನೌಕರರ ಪತಿ/ ಪತ್ನಿ ಅಥವ ಮಕ್ಕಳು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಚಿಕಿತ್ಸೆ ಲಭ್ಯವಿರುವ ಕಡೆಗೆ ವರ್ಗಾವಣೆ ಮಾಡಬೇಕು.
ಒಂದು ವೇಳೆ ನೌಕರ ಅಪೇಕ್ಷಿಸಿದಲ್ಲಿ ನಿವೃತ್ತಿಗೆ ಒಂದು ವರ್ಷಕ್ಕಿಂತ ಕಡಿಮೆ ಸೇವೆ ಇರುವ ನೌಕರರ ವರ್ಗಾವಣೆ ಮಾಡಬಾರದು. ಸರ್ಕಾರಿ ನೌಕರರ ಸಂಘದ, ಕೇಂದ್ರ ಪದಾಧಿಕಾರಿಗಳು ವಿನಂತಿ ಮಾಡದ ಹೊರತು ಪದಾಧಿಕಾರಿ ಅವಧಿ ಪೂರ್ಣಗೊಳ್ಳುವ ತನಕ ವರ್ಗಾವಣೆ ಮಾಡಬಾರದು ಎಂದು ನಿಯಮ ರೂಪಿಸಲಾಗಿದೆ.
ಕೋರಿಕೆ ಇಲ್ಲದೆ ದಿವ್ಯಾಂಗ ಮಾನದಂಡದ ಮಟ್ಟವುಳ್ಳ ನೌಕರರು, ಗಂಭೀರ ಕಾಯಿಲೆ ಇರುವ ನೌಕರರನ್ನು ವರ್ಗಾವಣೆ ಮಾಡಬಾರದು ಎಂದು ನಿಯಮ ರೂಪಿಸಲಾಗಿದೆ. ಈ ಕರಡು ನಿಯಮಕ್ಕೆ ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಈ ಕುರಿತು ಅಂತಿಮ ಆದೇಶವನ್ನು ಸರ್ಕಾರ ಹೊರಡಿಸಲಿದೆ.
ಮತ್ತೊಂದು ನಿಯಮದ ಪ್ರಕಾರ ಯಾವುದೇ ನೌಕರರ ವಿರುದ್ಧ ದುರ್ನಡತೆ/ ಅವ್ಯವಹಾರ/ ಹಣಕಾಸು ದುರ್ಬಳಕೆ ಅಥವಾ ಯಾವುದೇ ಶಿಸ್ತು ಕ್ರಮ ಇದ್ದಲ್ಲಿ ಅಂತಹ ಅಧಿಕಾರಿಗಳನ್ನು ರಾಜ್ಯಾದ್ಯಂತ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಸ್ಥಳಕ್ಕೆ ನಿಯುಕ್ತಿಗೊಳಿಸಲು ಆಯಾ ಸಕ್ಷಮ ಪ್ರಾಧಿಕಾರಗಳು ವರ್ಗಾವಣೆ ಮಾಡಬಹುದು ಎಂದು ಹೇಳಿದೆ.












Click it and Unblock the Notifications