Gowri Ganesha Festival: ಗೌರಿ-ಗಣೇಶ ಹಬ್ಬ; 2,400 ವಿಶೇಷ KSRTC ಬಸ್; ಯಾವ ಊರಿಗೆ ಎಲ್ಲಿಂದ ಬಸ್?
Gowri Ganesha Festival: ಗೌರಿ-ಗಣೇಶ ಹಬ್ಬ ಹಾಗೂ ಸತತ ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು KSRTC ನಿರ್ಧರಿಸಿದೆ.
ಸೆಪ್ಟೆಂಬರ್ 14ರಂದು ಗೌರಿ-ಗಣೇಶ ಹಬ್ಬವಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 12ರಂದು ಶನಿವಾರ ಹಾಗೂ 13ರಂದು ಭಾನುವಾರ ಇರುವುದರಿಂದ ಸತತ ರಜೆ ಸಿಗಲಿದೆ. ಹೀಗಾಗಿ ಬೆಂಗಳೂರಿನಿಂದ ದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮ ಊರುಗಳಿಗೆ ತೆರಳುವ ನಿರೀಕ್ಷೆ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 11ರಿಂದ 13ರವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಪ್ರಮುಖ ನಗರಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ.

Gowri Ganesha Festival: ವಿಶೇಷ ಬಸ್
ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗೂ KSRTC ವಿಶೇಷ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 14ರಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಅಂತರರಾಜ್ಯ ಸ್ಥಳಗಳಿಂದ ಬೆಂಗಳೂರಿನತ್ತ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದಲೂ ಹೆಚ್ಚುವರಿ ಸೇವೆ ಕಲ್ಪಿಸುವ ಸಾಧ್ಯತೆ ಇದೆ.
Gowri Ganesha Festival:ಯಾವೆಲ್ಲ ಊರುಗಳಿಗೆ ಬಸ್?
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಹಾಗೂ ಬೀದರ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಇದೇ ಮಾರ್ಗದಲ್ಲಿ ತಿರುಪತಿ, ವಿಜಯವಾಡ ಹಾಗೂ ಹೈದರಾಬಾದ್ ಸೇರಿದಂತೆ ಹೊರರಾಜ್ಯದ ಪ್ರಮುಖ ನಗರಗಳಿಗೂ ವಿಶೇಷ ಸೇವೆ ಇರಲಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಶಾಂತಿನಗರದಿಂದ ತಮಿಳುನಾಡು, ಕೇರಳಕ್ಕೆ ಬಸ್
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ತಮಿಳುನಾಡು ಹಾಗೂ ಕೇರಳದ ವಿವಿಧ ನಗರಗಳಿಗೆ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಚೆನ್ನೈ, ಮಧುರೈ, ಕುಂಭಕೋಣಂ, ಕೊಯಮತ್ತೂರು, ತಿರುಚಿರಾಪಳ್ಳಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಹಾಗೂ ಕೋಝಿಕ್ಕೋಡ್ ಸೇರಿದಂತೆ ಹಲವು ಸ್ಥಳಗಳಿಗೆ ಸೇವೆ ಲಭ್ಯವಿರಲಿದೆ.
ಟಿಕೆಟ್ ಬುಕ್ಕಿಂಗ್ ಮಾಡಿದರೆ ರಿಯಾಯಿತಿ
* ಹಬ್ಬದ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವಲ್ಲಿಯೂ KSRTC ರಿಯಾಯಿತಿ ನೀಡುತ್ತಿದೆ.
* ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಂದೇ ಟಿಕೆಟ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿದರೆ 5% ರಿಯಾಯಿತಿ
* ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಹಿಂದಿರುಗುವ ಪ್ರಯಾಣದ ಟಿಕೆಟ್ ದರದಲ್ಲಿ 10% ರಿಯಾಯಿತಿ.
* ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
ಪ್ರಯಾಣಿಕರಿಗೆ ಮಹತ್ವದ ಸೂಚನೆ
ಹಬ್ಬದ ಸಂದರ್ಭದಲ್ಲಿ ಬಸ್‌ಗಳಲ್ಲಿ ಭಾರಿ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಕೊನೆಯ ಕ್ಷಣದವರೆಗೆ ಕಾಯದೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವಂತೆ KSRTC ಸೂಚಿಸಿದೆ. ಟಿಕೆಟ್ ಕಾಯ್ದಿರಿಸಿದ ಬಳಿಕ ಅದರಲ್ಲಿ ನಮೂದಿಸಿರುವ ಪಿಕಪ್ ಪಾಯಿಂಟ್ ಹಾಗೂ ಬಸ್ ನಿಲ್ದಾಣವನ್ನು ಸರಿಯಾಗಿ ಪರಿಶೀಲಿಸುವುದು ಮುಖ್ಯವಾಗಿದೆ.


Click it and Unblock the Notifications
