5, 8ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ; ಅ.13ರಂದು ತೀರ್ಮಾನ
ಬೆಂಗಳೂರು, ಅಕ್ಟೋಬರ್ 09: ರಾಜ್ಯದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮಾದರಿಯ ಪಬ್ಲಿಕ್ ಪರೀಕ್ಷೆ ನಡೆಸುವ ಉದ್ದೇಶ ಸರ್ಕಾರಕ್ಕಿಲ್ಲ. ಬದಲಾಗಿ ಪರ್ಯಾಯ ಪರೀಕ್ಷೆ ನಡೆಸುವ ಸಂಬಂಧ ಚರ್ಚೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದರು.
ಭಾನುವಾರ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಐದು ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿ ಪರ್ಯಾಯ ಪರೀಕ್ಷೆ ನಡೆಸಲಾಗುವುದು. ಈ ಸಂಬಂಧ ಅಕ್ಟೋಬರ್ 13ರಂದು ನಡೆಯಲಿರುವ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಂಬಂಧಿಸಿದವರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಮಾದರಿಯಲ್ಲಿ ಪರ್ಯಾಯ ಪರೀಕ್ಷೆ ನಡೆಸಲು ಹಾಗೂ ಮಕ್ಕಳ ಕಲಿಕೆಗೆ ಸಹ ಸರ್ಕಾರ ಆದ್ಯತೆ ನೀಡುತ್ತಿದೆ. ಈ ಪರೀಕ್ಷೆಗಳ ಈಗಾಗಲೇ ಕರ್ನಾಟಕದಲ್ಲಿ ಜಾರಿಯಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ನಡೆಯಲಿದೆ ಎಂದು ಅವರು ವಿವರಿಸಿದರು.

ಉನ್ನತ ಮಟ್ಟದ ಸಭೆ; 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸುವ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಅಕ್ಟೊಬರ್ 13ರಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಅಂದು ಪರೀಕ್ಷೆಗಳ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ಹೊರ ಬೀಳಲಿದೆ.
ಕಲಿಕಾ ಗುಣಮಟ್ಟದ ಹೆಸರಿನಲ್ಲಿ 5ಮತ್ತು 8ನೇ ತರಗತಿ ಶಾಲೆಗಳ ವಾರ್ಷಿಕ ಪಬ್ಲಿಕ್ ಪರೀಕ್ಷೆ ನಡೆಸಬಾರದು. ಈ ಬಗೆಗಿನ ನಿರ್ಧಾರದಿಂದ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಹಿಂದೆ ಸರಿಯಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ಒಟ್ಟು 1ಕೋಟಿ 5ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಪಬ್ಲಿಕ್ ಪರಿಕ್ಷೆಗೆ ಸೂಕ್ತ ಪೂರ್ವ ಸಜ್ಜು ಮಾಡಿಕೊಳ್ಳದೇ ವರ್ಷದ ಮಧ್ಯೆ ಭಾಗದಲ್ಲಿ ಇಂತ ಪ್ರಯತ್ನ ಮಾಡಿದರೆ ಅದರ ನಕಾರಾತ್ಮಕ ಪ್ರಭಾವ ಮಕ್ಕಳ ಮೇಲೆ ಉಂಟಾಗುತ್ತದೆ. ಈ ಹಿಂದೆ ಸಾರ್ವಜನಿಕ ವಲಯದಿಂದ ಪಬ್ಲಿಕ್ ಪರೀಕ್ಷೆಗೆ ವಿರೋದ ಕೇಳಿ ಬಂದಾಗ, ಶಿಕ್ಷಣ ಇಲಾಖೆಯು
ಇದೇ ಪರೀಕ್ಷೆಯನ್ನು ಮೌಲ್ಯಾಂಕನ ಹೆಸರಿನಲ್ಲಿ ಪರೀಕ್ಷೆ ನಡೆಸುವ ಮೂಲಕ ಟೀಕೆಗೆ ಒಳಗಾಗಿತ್ತು. ಇದೀಗ ಪಬ್ಲಿಕ್ ಮಾದರಿಯ ಪರೀಕ್ಷೆಗೆ ಬಗ್ಗೆ ಗಮನಹರಿಸುತ್ತಿದೆ. ಈ ಬಗ್ಗೆ ಅಕ್ಟೋಬರ್ 13ರಂದು ಸಭೆ ನಡೆಸಿ ತಿಳಿಸುವುದಾಗಿ ಸರ್ಕಾರ ಹೇಳಿದೆ ಎಂದರು.












Click it and Unblock the Notifications