ಕರ್ನಾಟಕದಲ್ಲಿ 6, ಬೆಂಗಳೂರಲ್ಲಿ 4 ಸ್ಯಾಟ್‌ಲೈಟ್ ಪಟ್ಟಣ ನಿರ್ಮಾಣ: ಏನಿದು ಸ್ಯಾಟ್‌ಲೈಟ್ ಪಟ್ಟಣ?
ಬೆಂಗಳೂರು, ಸೆಪ್ಟಂಬರ್ 11: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ನಾಲ್ಕು ಉಪಗ್ರಹ ಪಟ್ಟಣಗಳು ಮತ್ತು ಕರ್ನಾಟಕದಲ್ಲಿ ಆರು ಸಮಗ್ರ ಪಟ್ಟಣಗಳನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಮುತ್ತ ಇರುವ ಬೆಂಗಳೂರು ಗ್ರಾಮಾಂತರ ಪಟ್ಟಣಗಳಾದ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗು ಇನ್ನೊಂದು ಹೊಸ ಪಟ್ಟಣವನ್ನು ಸೇರಿ ಒಟ್ಟು ನಾಲ್ಕು ಪ್ರದೇಶಗಳನ್ನು ಸೆಟಿಲೈಟ್ ಟೌನ್‌ಗಳಾಗಿ ಅಭಿವೃದ್ಧಿಪಡಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ನಗರ ಅಭಿವೃದ್ಧಿಪಡಿಸಬೇಕು ಮತ್ತು ವಿಸ್ತರಿಸಬೇಕಿರುವುದು ಅಗತ್ಯವಾಗಿದೆ ಎಂದು 'ಹೊಸ ಬೆಂಗಳೂರು' ನಿರ್ಮಾಣದ ಮಹತ್ವ ಕುರಿತು ಅವರು ತಿಳಿಸಿದರು.
ಈ ಕುರಿತು ಶನಿವಾರ ದೊಡ್ಡಬಳ್ಳಾಪುರದಲ್ಲಿ ಘೋಷಿಸಿ ಮುಖ್ಯಮಂತ್ರಿಗಳು, ಹಾಲಿ ಇರುವ ದೇವನಹಳ್ಳಿ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಪ್ರದೇಶವನ್ನು ಬೆಂಗಳೂರಿನ ಸ್ಯಾಟ್‌ಲೈಟ್ ಪಟ್ಟಣಗಳನ್ನಾಗಿ ಮಾಡಲಾಗುವುದು. ಸರ್ಕಾರಕ್ಕೆ ಒಂದು ವರ್ಷ ಮತ್ತು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದು ಮೂರು ವರ್ಷ ಪೂರೈಸಿದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

'ಬೆಂಗಳೂರು ಒಂದು ಗ್ರಹದಂತೆ'
ಬೆಂಗಳೂರು ಒಂದು ಗ್ರಹದಂತೆ ಇರಬೇಕು. ಉಪಗ್ರಹ ಪಟ್ಟಣಗಳು, ರೈಲು, ಉತ್ತಮ ರಸ್ತೆಗಳು, ಹೈಟೆಕ್ ಪ್ರಯಾಣ ವ್ಯವಸ್ಥೆಗಳು ಮತ್ತು ಪ್ರಯಾಣಿಕರಿಗೆ ಸುಲಭವಾದ ಸಾರಿಗೆ ವ್ಯವಸ್ಥೆ, ವ್ಯವಸ್ಥಿತ ಸಂಪರ್ಕ ಇರಬೇಕು ಎಂದು ಈ ಹಿಂದಿನ ಸಭೆಯೊಂದರಲ್ಲಿ ಅವರು ಅಭಿಪ್ರಾಯಪಟ್ಟಿದ್ದರು.
ಬೆಂಗಳೂರಿನ ಸುತ್ತಲೂ ಕನಿಷ್ಠ ನಾಲ್ಕು ಹೊಸ ಬೆಂಗಳೂರು ನಿರ್ಮಾಣವಾಗಬೇಕು. ಈ ನಾಲ್ಕು ಪಟ್ಟಣ ನಡುವೆ ನಾವು ಆರೋಗ್ಯ ನಗರ ಮತ್ತು ಸಮಗ್ರ ಕೈಗಾರಿಕಾ ಟೌನ್‌ಶಿಪ್‌ನಂತಹ ವಿವಿಧ ರೀತಿಯ ಚಟುವಟಿಕೆ ಹೊಂದಲು ಸಾಧ್ಯವಾಗುತ್ತದೆ. ಇಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಸಂಬಂಧಿತ ಉದ್ಯಮಗಳು ಸೇರಿಕೊಂಡಿವೆ ಎನ್ನವು ಮೂಲಕ ಭವಿಷ್ಯದ ಪಟ್ಟಣ ನಿರ್ಮಾಣ ಹೇಗೆರಲಿವೆ ಎಂಬುದನ್ನು ಮುಖ್ಯಮಂತ್ರಿಗಳು ವಿವರಿಸಿದರು.

4ನೇ ಸ್ಯಾಟ್‌ಲೈಟ್ ಪಟ್ಟಣ ಯಾವುದು?
ದೇವನಹಳ್ಳಿ ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಪ್ರದೇಶವಾಗಿದೆ. ಬೆಂಗಳೂರಿನಿಂದ ಈಶಾನ್ಯ ಮಾರ್ಗವಾಗಿ 40 ಕಿ.ಮೀ. ದೂರ ಸಾಗಿದರೆ ದೇವನಹಳ್ಳಿ ತಲುಪುತ್ತೇವೆ. ಅದರ ಸಮೀಪವೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ನೆಲಮಂಗಲ ಪಟ್ಟಣವು ಬೆಂಗಳೂರು ಗ್ರಾಮಾಂತರದ ರಾಷ್ಟ್ರೀಯ ಹೆದ್ದಾರಿ 75 ಮತ್ತು 4 ರ ಜಂಕ್ಷನ್ ಪಾಯಿಂಟ್ ಸಮೀಪದಲ್ಲಿದೆ. ದೊಡ್ಡಬಳ್ಳಾಪುರ ಹಲವಾರು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿರುವ ಕೈಗಾರಿಕಾ ನಗರವಾಗಿದೆ. ನಾಲ್ಕನೆ ಹೊಸ ಸ್ಯಾಟ್‌ಲೈಟ್ ನಗರ ಯಾವುದು ಎಂಬುದರ ಕುರಿತು ಪ್ರಸ್ತಾಪವಾಗಿಲ್ಲ ಎಂದು ಅವರು ಹೇಳಿದರು.
ರಾಮನಗರ ಜಿಲ್ಲೆಯ ಒಂದು ಭಾಗವೋ ಅಥವಾ ಆನೇಕಲ್ ತಾಲೂಕಿನ ಒಂದು ಭಾಗವನ್ನೋ ಸೆಟಿಲೈಟ್ ಟೌನ್ ಆಗಿ ರೂಪಿಸುವ ಸಾಧ್ಯತೆ ಇದೆ.












Click it and Unblock the Notifications