Govt Employees Salary Hike : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಶೇ. 17ರಷ್ಟು ವೇತನ ಹೆಚ್ಚಳ
ಹಣಕಾಸು ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಬೆಳಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಬೆಂಗಳೂರು, ಮಾರ್ಚ್ 01; 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಕರ್ನಾಟಕದ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಘೋಷಣೆ ಮಾಡಿದರು.
ಹಣಕಾಸು ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಬೆಳಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು, ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, "ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾನ ಆಗಿದೆ. ಈ ಕುರಿತು ಆದೇಶ ಹೊರಡಿಸುವ ಪ್ರಕ್ರಿಯೆ ನಡೆಯುತ್ತಿದೆ." ಎಂದು ಹೇಳಿದರು.

ಸರ್ಕಾರಿ ನೌಕರರು ಎನ್‌ಪಿಎಸ್ ರದ್ದುಗೊಳಿಸುವ ಬೇಡಿಕೆಯನ್ನು ಇಟ್ಟಿದ್ದರು. ಈ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, "ಎನ್‌ಪಿಎಸ್ ಬೇರೆ-ಬೇರೆ ರಾಜ್ಯಗಳಲ್ಲಿ ಏನು ಆಗಿದೆ? ಎಂದು ಎರಡು ತಿಂಗಳಿನಲ್ಲಿ ಎಸಿಎಸ್ ನೇತೃತ್ವದಲ್ಲಿ ವರದಿ ತರಿಸಿಕೊಳ್ಳುತ್ತೇವೆ. ಸರ್ಕಾರಿ ನೌಕರರು ಮುಷ್ಕರ ಕೈ ಬಿಡುವ ವಿಶ್ವಾಸವಿದೆ. ಮುಷ್ಕರ ಕೈ ಬಿಡಿ ಎಂದು ನಾನು ಮನವಿ ಮಾಡುತ್ತೇನೆ" ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಬಳಿಕ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ, "ಸರ್ಕಾರದ ಅಂತಿಮ ಅಧಿಕೃತ ಆದೇಶ ಹೊರಬರುವವರೆಗೆ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳು ಬಾಯಿ ಮಾತಿಗೆ ಹೇಳಿದರೆ ಸಾಕಾಗುವುದಿಲ್ಲ" ಎಂದು ತಿಳಿಸಿದರು.

ಬುಧವಾರ ಬೆಳಗ್ಗೆ ಬಸವರಾಜ ಬೊಮ್ಮಾಯಿ ಅವರ ಆರ್. ಟಿ. ನಗರ ನಿವಾಸದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ನೌಕರರ ಬೇಡಿಕೆ ಆಲಿಸಿದ್ದ ಮುಖ್ಯಮಂತ್ರಿಗಳು ಎರಡು ಗಂಟೆಯಲ್ಲಿ ಸರ್ಕಾರದ ತೀರ್ಮಾನ ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಗೃಹ ಕಚೇರಿಗೆ ಆಗಮಿಸಿ, ಅಧಿಕಾರಿಗಳ ಜೊತೆ ಸಭೆ ನಡೆಸಿ ತೀರ್ಮಾನ ಪ್ರಕಟಿಸಿದ್ದಾರೆ.
ಸಭೆಗೆ ಆಹ್ವಾನ; ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಜೊತೆಗಿನ ಎರಡು ಸಭೆ ವಿಫಲವಾದ ಬಳಿಕ ಕರ್ನಾಟಕದ ಸರ್ಕಾರಿ ನೌಕರರು ಬುಧವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ. ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆ, ಕಾಲೇಜುಗಳಿಗೆ ನೌಕರರು ಗೈರಾಗಿದ್ದಾರೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮಾತ್ರ ಲಭ್ಯವಿದೆ. ವಿಧಾನಸೌಧ, ವಿಕಾಸಸೌಧದಲ್ಲಿ ಹಲವು ಕಚೇರಿಗಳು ಬಾಗಿಲು ತೆರೆದಿಲ್ಲ.
ಬುಧವಾರ ಬೆಳಗ್ಗೆ ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿದ್ದಾರೆ. ಈ ಸಭೆಯ ಬಳಿಕ ಮುಷ್ಕರ ವಾಪಸ್ ಪಡೆಯುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಬೇಡಿಕೆಗಳು
* 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಆದಷ್ಟು ಬೇಗನೆ ಪಡೆದು, ಚುನಾವಣೆ ನೀತಿ ಸಂಹಿತೆಗಿಂತ ಮೊದಲು ಶೇ. 40 ಫಿಟ್‌ಮೆಂಟ್ ಸೌಲಭ್ಯವನ್ನು ದಿನಾಂಕ 01/07/2022ರಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ನೌಕರರು ಮೊದಲ ಬೇಡಿಕೆ ಇಟ್ಟಿದ್ದರು.
* ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಎನ್‌ಪಿಎಸ್ ರದ್ದಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್‌ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ಎಂದು ಬೇಡಿಕೆ ಮುಂದಿಡಲಾಗಿತ್ತು.












Click it and Unblock the Notifications