Government employee; ಗಳಿಕೆ ರಜೆ ನಗದೀಕರಣದ ಸ್ಪಷ್ಟನೆ
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ವೇತನ ಶೇ 17ರಷ್ಟು ಏರಿಕೆ ಮಾಡಿದೆ. ಈಗ ಗಳಿಕೆ ರಜೆ ನಗದೀಕರಣದ ಕುರಿತು ಆದೇಶ ಹೊರಡಿಸಿದೆ.
ಬೆಂಗಳೂರು, ಮಾರ್ಚ್ 03; 7ನೇ ವೇತನ ಆಯೋಗದ ಶಿಫಾರಸು ಜಾರಿಗಾಗಿ ಮುಷ್ಕರ ಆರಂಭಿಸಿದ್ದ ಸರ್ಕಾರಿ ನೌಕರರ ವೇತನವನ್ನು ಶೇ 17ರಷ್ಟು ಹೆಚ್ಚಳ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಮಧ್ಯಂತರ ಪರಿಹಾರ ಎಂದು ಸರ್ಕಾರ ಉಲ್ಲೇಖ ಮಾಡಿತ್ತು. ಈಗ ಮಧ್ಯಂತರ ಪರಿಹಾರವನ್ನು ಗಳಿಕೆ ರಜೆ ನಗದೀಕರಣಕ್ಕಾಗಿ ಪರಿಗಣಿಸುವ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ಈ ಕುರಿತು ಆದೇಶವನ್ನು ಸಹ ಹೊರಡಿಸಲಾಗಿದೆ.
ಸರ್ಕಾರದ ಜಂಟಿ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು) ಕೆ. ಎಸ್. ಗೋಪಾಲಕೃಷ್ಣ ಈ ಕುರಿತು ಗುರುವಾರ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01/11/2011ರಿಂದ ಜಾರಿಗೆ ಬರುವಂತೆ ಅವರ ಮೂಲ ವೇತನದ ಶೇ 15ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು
ಮಾಡಲಾಗಿದೆ.

ಮೇಲ್ಕಂಡ ಉಲ್ಲೇಖದ ಆದೇಶದಲ್ಲಿ ಮಂಜೂರು ಮಾಡಿರುವ ಮಧ್ಯಂತರ ಪರಿಹಾರವನ್ನು ಎರಡು ವರ್ಷಗಳ ಬ್ಲಾಕ್ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118ರನ್ವಯ ನೀಡುವ ಗಳಿಕೆ ರಜೆ ನಗದೀಕರಣಕ್ಕಾಗಿ ಪರಿಗಣಿಸಬಹುದೇ? ಎಂಬ ಬಗ್ಗೆ ಸ್ಪಷ್ಟೀಕರಣವನ್ನು ಕೋರಲಾಗಿದೆ. ಈ ಅಂಶಗಳನ್ನು ಪರಿಶೀಲಿಸಿ, ಈ ಕೆಳಕಂಡಂತೆ ಸಮೀಕರಣವನ್ನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
* ಮಧ್ಯಂತರ ಪರಿಹಾರವನ್ನು ಎರಡು ವರ್ಷಗಳ ಬ್ಲಾಕ್ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118 ರನ್ವಯ ನೀಡುವ ಗಳಿಕೆ ರಜೆ ನಗದೀಕರಣಕ್ಕಾಗಿ
ಪರಿಗಣಿಸಬಹುದು.
* ಆದರೆ, ನಿವೃತ್ತಿ ಹೊಂದುತ್ತಿರುವ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118 ಎ ರನ್ವಯ ಅವರ ಹಕ್ಕಿನಲ್ಲಿರುವ ಗಳಿಕೆ ರಜೆ ನಗದೀಕರಣದ ಸೌಲಭ್ಯಕ್ಕಾಗಿ ಮಧ್ಯಂತರ ಪರಿಹಾರವನ್ನು ಲೆಕ್ಕಹಾಕುವಂತಿಲ್ಲ.
* ಆಸಾಧಾರಣ ರಜೆ ಅಥವಾ ವೇತನರಹಿತ ರಜೆಯನ್ನು ಹೊರತುಪಡಿಸಿ, ರಜೆಯ ಸಂದರ್ಭದಲ್ಲಿಯೂ ಮಧ್ಯಂತರ ಪರಿಹಾರವು ಲಭ್ಯವಾಗುತ್ತದೆ ಎಂದು ಕೆ. ಎಸ್. ಗೋಪಾಲಕೃಷ್ಣ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದಿಂದ ಅಧಿಕೃತ ಆದೇಶ; ಮಾರ್ಚ್ 1ರ ಬುಧವಾರ ಬೆಳಗ್ಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣದಲ್ಲಿ ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯ ಬಳಿಕ, "ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾನ ಆಗಿದೆ. ಈ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದೆ" ಎಂದು ಘೋಷಣೆ ಮಾಡಿದ್ದರು.
ಬಳಿಕ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಶೇ 17ರಷ್ಟು ವೇತನ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದರು. ಈ ವೇತನ ಹೆಚ್ಚಳ ಆದೇಶ 2023ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ದಿನಾಂಕ 19/11/2022ರ ಕರ್ನಾಟಕ ಸರ್ಕಾರದ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ, ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ ಈ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿರುತ್ತದೆ ಎಂದು ತಿಳಿಸಲಾಗಿತ್ತು. ಈ ಆದೇಶದ ಮೂಲಕ ಮಂಜೂರಾದ ತಾತ್ಕಾಲಿಕ ಪರಿಹಾರದ ಮೊತ್ತವು ವಿಶಿಷ್ಠ ಸಂಭಾವನೆಯಾಗಿದ್ದು, ಇದು ನಿವೃತ್ತಿ ಸೌಲಭ್ಯ/ ತುಟ್ಟಿಭತ್ಯೆಯನ್ನು ನಿರ್ಧರಿಸುವಾಗ ಅಥವ ಬೇರೆ ಯಾವುದೇ ಉದ್ದೇಶಗಳಿಗೆ ಪರಿಗಣಿಸತಕ್ಕದ್ದಲ್ಲ ಎಂದು ತಿಳಿಸಲಾಗಿತ್ತು.












Click it and Unblock the Notifications