'ಅಪ್ಪು' ಅಭಿಮಾನಿಗಳಿಗೆ ಸಿಹಿ ಸುದ್ದಿ: ಹೃದಯಾಘಾತ ತಡೆಗೆ ರಾಜ್ಯಾದ್ಯಂತ 'ಹೃದಯಜ್ಯೋತಿ' ಯೋಜನೆ ಜಾರಿಗೆ ಸಜ್ಜು
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕದಲ್ಲಿ ಕೊರೊನಾ ನಂತರ ಹೃದಯಘಾತದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಅದರಲ್ಲೂ 40 ವರ್ಷ ವಯಸ್ಸಿನೊಳಗಿನ ಹದಿ ಹರೆಯದವರಲ್ಲಿಯೂ ಈ ಅನಾರೋಗ್ಯ ಕಂಡು ಬರುತ್ತಿದೆ. ಈ ನಿಮಿತ್ತ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಜನರ ಜೀವ ಉಳಿಸಲು 'ಹೃದಯಜ್ಯೋತಿ' ಯೋಜನೆ ಜಾರಿಗೊಳಿಸಲು ಸಜ್ಜಾಗಿದೆ. ಈ ಮೂಲಕ ದಿ. ಪುನೀತ್ ರಾಜಕುಮಾರ್ ಅವರ ಎರಡನೇ ಪುಣ್ಯ ಸ್ಮರಣೆ ಬೆನ್ನಲ್ಲೆ ಅವರ ಅಭಿಮಾನಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಅಧಿಕೃತಾಗಿ ಮಾಹಿತಿ ನೀಡಿದೆ.
ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಇದೊಂದು ಪಿಡುಗಿನಂತೆ ಕಾಡುತ್ತಿದೆ. ನಮ್ಮ ಸರ್ಕಾರ ಮಹತ್ವದ 'ಹೃದಯಜ್ಯೋತಿ' ಯೋಜನೆ ಜಾರಿಗೊಳಿಸಲಿದೆ.

ಮೊದಲ ಹಂತದಲ್ಲಿ ರಾಜ್ಯಾದ್ಯಂತ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 85 ಆಸ್ಪತ್ರೆಗಳಲ್ಲಿ ಈ 'ಹೃದಯಜ್ಯೋತಿ' ಜಾರಿ ಆಗಲಿದೆ. ಇಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಎಲ್ಲಾ ಬಗೆಯ ಉಚಿತ ಚಿಕಿತ್ಸೆ ನೀಡುವ ಮೂಲಕ ಹೃದಯಾಘಾತದಿಂದ ನಮ್ಮ ಜನರನ್ನು ರಕ್ಷಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಅಪ್ಪು ಸ್ಮರಣಾರ್ಥ ಯೋಜನೆ ಜಾರಿ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಈ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲಿದೆ. ಯೋಜನೆಯಲ್ಲಿ 50 ಖಾಸಗಿ ಆಸ್ಪತ್ರೆಗಳು ಸೇರಿವೆ. ಈ ಯೋಜನೆಯನ್ನು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಯೋಜನೆಗೆ ಅವರ ಹೆಸರನ್ನೇ ಸರ್ಕಾರ ಇಡಲ ನಿರ್ಧರಿಸಿದೆ. ಇನ್ಮುಂದೆ 'ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ' ಸೇವೆ ರಾಜ್ಯದ ಆಸ್ಪತ್ರೆಗಳಲ್ಲಿ ಸಿಗಲಿದೆ.
ಸದರಿ ಉದ್ದೇಶಿತ ಯೋಜನೆಯಲ್ಲಿ ಒಟ್ಟು 16 ಜಿಲ್ಲೆಗಳ ಆಸ್ಪತ್ರೆಗಳನ್ನು ಸರ್ಕಾರ ಗುರುತಿಸಿದೆ. ಯಾರಿಗಾದರೂ ಹೃದಯ ಸಂಬಂಧಿ ಖಾಯಿಲೆಗಳ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗಳಿಗೆ ಭೇಟಿ ನೀಡಿದರೆ, ರೋಗಿಗೆ ಇಸಿಜಿ ಮಾಡಲಾಗುತ್ತದೆ. ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ, ವಿಶೇಷ ಇಂಜೆಕ್ಷನ್ (ಟೆನಕ್ಟ್ ಪ್ಲಸ್) ನೀಡಲಾಗುತ್ತದೆ. ಇದೆಕ್ಕೆಲ್ಲ ಸುಮಾರು 40 ಸಾವಿರ ರೂಪಾಯಿ ಖರ್ಚಾಗುತ್ತದೆ.

ರೋಗಿಗಳಿಗೆ ಉಚಿತ ಚಿಕಿತ್ಸೆ
ಸಾಲದೆಂಬಂತೆ ಇನ್ನಿತರ ಚಿಕಿತ್ಸೆಗಳನ್ನು ರೋಗಿಗೆ ನೀಡಬೇಕಾಗುತ್ತದೆ. ಆದರೆ ಈ ಯೋಜನೆಯಡಿ ನೀವಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇನ್ನೂ ಯೋಜನೆ ಜಾರಿಗೆ ಗುರುತಿಸಲಾಗಿರುವ ಆಸ್ಪತ್ರೆಗಳಲ್ಲಿ ಎಐ ಆಧಾರಿತ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಈ ಸಂಬಂಧವೇ ನುರಿತ ಸಂಸ್ಥೆಯು ಕೈಜೋಡಿಸಿದೆ. ರೋಗಿಗೆ ಹೆಚ್ಚುವರಿ ಚಿಕಿತ್ಸೆ ಒದಗಿಸಲು ರಾಜ್ಯದ ಏಳು ಕಡೆ ಹಬ್ಸ್ ಎನ್ನುವ ಮಾದರಿ ಮಾಡಲಾಗುತ್ತಿದೆ.
ಈ ವ್ಯವಸ್ಥೆ ಅಡಿ ಬಡ ರೋಗಿಗಳಿಗೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಹಾಗೂ ಬಿಪಿಎಲ್ ಪಡಿತರಿಗೆ, ಆಯುಷ್ಮಾನ್ ಯೋಜನೆ ಫಲಾನುಭವಿಗಳಿಗೆ ಯೋಜನೆಯಡಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ಪ್ಲಾನ್ ಮಾಡಿದೆ. ಆದಷ್ಟು ಶೀಘ್ರವೇ ಮೊದಲ ಹಂತದಲ್ಲಿ ಈ ಯೋಜನೆ ರಾಜ್ಯಾದ್ಯಂತ ಜಾರಿ ಆಗಲಿದೆ.












Click it and Unblock the Notifications