Government employee: ವಿಆರ್‌ಎಸ್‌ನತ್ತ ನೌಕರರ ಚಿತ್ತ ಏಕೆ?
ಬೆಂಗಳೂರು, ಫೆಬ್ರವರಿ 26; ಕರ್ನಾಟಕದ ಸರ್ಕಾರಿ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಎಲ್ಲಾ ಇಲಾಖೆಗಳ ಅಧಿಕಾರಿ/ ಸಿಬ್ಭಂದಿಗಳನ್ನು ಸೇರಿಸಿ ಸುಮಾರು 2.50 ಲಕ್ಷ ಹುದ್ದೆಗಳು ಭರ್ತಿಯಾಗಬೇಕಿದೆ ಎಂದು ಅಂದಾಜಿಸಲಾಗಿದೆ. ಖಾಲಿ ಹುದ್ದೆಗಳ ಪರಿಣಾಮ ಇರುವ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ.
ಕರ್ನಾಟಕದ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘ ಕೆ. ಸುಧಾಕರ್ ನೇತೃತ್ವದ 7ನೇ ವೇತನ ಆಯೋಗಕ್ಕೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಮಾರ್ಚ್‌ನಲ್ಲಿ ಆಯೋಗ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆ ಇದೆ.

ಶಿಕ್ಷಣ, ಕಂದಾಯ, ಆರೋಗ್ಯ, ಪಂಚಾಯತ್ ರಾಜ್, ಕೃಷಿ, ಸಮಾಜ ಕಲ್ಯಾಣ ಹೀಗೆ ವಿವಿಧ ಪ್ರಮುಖ ಇಲಾಖೆಗಳಲ್ಲಿ ಸಿಬ್ಬಂದಿ ಕೊರೆಯ ಕಾರಣ ಕಾರ್ಯದೊತ್ತಡ ಉಂಟಾಗಿದೆ. ಆದ್ದರಿಂದ ಇನ್ನೂ 3, 4 ವರ್ಷ ಸೇವಾವಧಿ ಬಾಕಿ ಇರುವ ಅಧಿಕಾರಿ/ ಸಿಬ್ಬಂದಿಗಳು ಸ್ವಯಂ ನಿವೃತ್ತಿಯತ್ತೆ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಹಲವು ಸೌಲಭ್ಯಗಳು: 30 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿದವರು ವಿವಿಧ ಕಾರಣಗಳಿಗೆ ಸ್ವಯಂ ನಿವೃತ್ತಿ ಪಡೆದರೆ ಸರ್ಕಾರದಿಂದ ಅಧಿಕ ಸವಲತ್ತು ದೊರೆಯುತ್ತದೆ. ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ವರದಿ ನಿರೀಕ್ಷೆಯಲ್ಲಿರುವ ನೌಕರರು ಅವಧಿಗೂ ಮೊದಲೇ ವಿಆರ್‌ಎಸ್ ಬಗ್ಗೆ ಚಿಂತಿಸಿದ್ದಾರೆ.
15 ವರ್ಷ ಸರ್ಕಾರಿ ಸೇವೆ ಮಾಡಿದವರು ಸ್ವಯಂ ಪ್ರೇರಿತವಾಗಿ ಸ್ವಯಂ ನಿವೃತ್ತಿ ಪಡೆಯಲು ಅವಕಾಶವಿದೆ. ಪಿಂಚಣಿ, ಗ್ರಾಚ್ಯುಟಿ, ಪರಿವರ್ತಿತ ವೇತನ ಎಂದು ಹಲವು ಸೌಲಭ್ಯಗಳು ಸಿಗುತ್ತವೆ. ಅಧಿಕ ಒತ್ತಡದಲ್ಲಿ ಕೆಲಸ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಸ್ವಯಂ ನಿವೃತ್ತಿಯೇ ಉತ್ತಮ ಎಂಬ ತೀರ್ಮಾನ ಹಲವು ನೌಕರರದ್ದು.
ಕರ್ನಾಟಕದ ಜನಸಂಖ್ಯೆಗೆ ಆಧಾರದ ಮೇಲೆ ಹುದ್ದೆಗಳ ಸಂಖ್ಯೆ ಹೆಚ್ಚಾಗಬೇಕಿದೆ. ಆದರೆ ಹುದ್ದೆ ಹೆಚ್ಚಾಗುವುದು ದೂರದ ಮಾತು, ಇರುವ ಹುದ್ದೆಗಳನ್ನೇ ಭರ್ತಿ ಮಾಡುತ್ತಿಲ್ಲ. ಕಾಲ ಕಾಲಕ್ಕೆ ನೇಮಕಾತಿ ನಡೆಸದೇ ಹೊರಗುತ್ತಿಗೆ, ನಿಯೋಜನೆ, ಹೆಚ್ಚುವರಿ ಜವಾಬ್ದಾರಿ ಸೇರಿದಂತೆ ವಿವಿಧ ಮೂಲಗಳ ಮೂಲಕ ಸರ್ಕಾರಿ ಆಡಳಿತ ಯಂತ್ರವನ್ನು ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ನಾವೆಲ್ಲರೂ 7ನೇ ವೇತನ ಆಯೋಗದ ವರದಿ ಅನುಷ್ಠಾನದ ನಿರೀಕ್ಷೆಯಲ್ಲಿದ್ದೇವೆ. ಆದರೆ ವಿಆರ್‌ಎಸ್ ಬಗ್ಗೆ ನೌಕರರ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. 60 ವರ್ಷದ ತನಕ ನೌಕರರು ಕಾರ್ಯ ನಿರ್ವಹಣೆ ಮಾಡುವಂತೆ ಆಗಬೇಕು" ಎಂದು ಹೇಳಿದ್ದಾರೆ.
ಪ್ರತಿವರ್ಷ ವೇತನ ಪಿಂಚಣಿಗಾಗಿ ಕೋಟ್ಯಾಂತರ ರೂಪಾಯಿ ವ್ಯಯಿಸುವ ಸರ್ಕಾರ ನೇಮಕಾತಿಗಳ ಬಗ್ಗೆ ಅಷ್ಟು ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ ಎಂಬುದು ಸರ್ಕಾರಿ ನೌಕರರ ಆರೋಪ. 2023ರಲ್ಲಿ ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದಕ್ಕೆ ಆರ್ಥಿಕ ಇಲಾಖೆಯ ಒಪ್ಪಿಗೆಯೂ ಸಿಕ್ಕಿದೆ.
ಎ, ಬಿ, ಸಿ ಮತ್ತು ಡಿ ಗ್ರೂಪ್ ಸೇರಿ ಒಟ್ಟು ಮಂಜೂರಾಗಿರುವ ಹುದ್ದೆಗಳ ಸಂಖ್ಯೆ 7,63,063 ಆಗಿದೆ. ಇವರಲ್ಲಿ ಹಾಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನೌಕರರು 5,12,720 ಆಗಿದೆ. 2,50,363 ಹುದ್ದೆಗಳು ಖಾಲಿ ಇವೆ. ಸಿ ಮತ್ತು ಡಿ ಗ್ರೂಪ್ ನೌಕರರ ನೇಮಕಾತಿ ಬದಲು ಸರ್ಕಾರ ಹೊರಗುತ್ತಿಗೆಯ ಮೊರೆ ಹೋಗಿದೆ ಎಂದು ಸರ್ಕಾರಿ ನೌಕರರು ಆರೋಪವನ್ನು ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯಕ್ಷಮತೆ ಕಾರ್ಯಾಗಾರವನ್ನು ಫೆಬ್ರವರಿ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸರ್ಕಾರಿ ನೌಕರರನನ್ನು ಉದ್ದೇಶಿಸಿ ಆಶಯನುಡಿಗಳನ್ನು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಡಲಿದ್ದಾರೆ. ಈ ಸಮಾವೇಶದಲ್ಲಿ ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರ ಯಾವುದಾದರೂ ಘೋಷಣೆ ಮಾಡಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications