Karnataka Jobs: ಸಿದ್ದರಾಮಯ್ಯ ಸರ್ಕಾರಕ್ಕೆ 'ದೂರುವ ಚಾಳಿ': ನಿರುದ್ಯೋಗದ ಬಗ್ಗೆ ಬೊಮ್ಮಾಯಿ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ತಮ್ಮ ಸರ್ಕಾರದ ತಪ್ಪುಗಳಿದ್ದರೂ ಕೂಡ ಹಿಂದಿನ ಸರ್ಕಾರ ದೂರುವ ಚಾಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಕಳೆದ ಮೂರು ವರ್ಷದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದಾರೆ ಎನ್ನುವ ಲೆಕ್ಕವನ್ನು ಕರುನಾಡಿನ ಯುವಜನರಿಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ಅಭಿವೃದ್ಧಿ ಶೇ 7.5% ಕ್ಕಿಂತ ಹೆಚ್ಚಿರುವ ಕಾರಣ ಖಾಸಗಿ ವಲಯದಲ್ಲಿ ಪ್ರತಿ ವರ್ಷ ಎರಡು ಕೋಟಿ ಕೆಲಸಗಳು ಮತ್ತು ಸ್ವಯಂ ಉದ್ಯೋಗಗಳು ಸೃಷ್ಟಿಯಾಗಿವೆ. ಆರ್ಥಿಕ ಅಭಿವೃದ್ಧಿಯ ಲಾಭ ಯುವಕರಿಗೆ ಮುಟ್ಟುತ್ತಿದೆ. ಆದಾಗ್ಯೂ ಕೂಡ ಉದ್ಯೋಗ ಸೃಷ್ಟಿಯಲ್ಲಿ ನಮ್ಮ ಭಾರತದ ಉತ್ಪಾದನಾ ವಲಯ ಹಾಗೂ ಸೇವಾ ವಲಯ ಹೆಚ್ಚು ಗಮನ ಕೊಡುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಸರ್ಕಾರ ಅವರಿಗೆ ಪೂರ್ಣ ಪ್ರಮಾಣದ ಆದೇಶ ನೀಡಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 14 ಸಾವಿರ ಹುದ್ದೆಗಳ ನೇಮಕ ಪ್ರಾರಂಭ ಮಾಡಿದ್ದೇವು, ಅದು ಕೂಡ ವಿಳಂಬ ಆಗಿದೆ. ಮತ್ತು ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಸಲುವಾಗಿ ಬಜೆಟ್ ನಲ್ಲಿ ಎಲ್ಲ ಆರ್ಥಿಕ ಸಿದ್ದತೆಯನ್ನು ಮಾಡಿಕೊಳ್ಳಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ನಿರುದ್ಯೋಗ ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿದ್ದಾರೆ.
ಬಜೆಟ್ ಅನುದಾನದ ಪ್ರಶ್ನೆ: ಒಂದು ಲಕ್ಷ ಉದ್ಯೋಗ ಸೃಷ್ಟಿಸಲು ನಮ್ಮ ಸರ್ಕಾರ ಬಜೆಟ್‌ನಲ್ಲಿ ಸಿದ್ಧತೆ ಮಾಡಿಕೊಂಡಿತ್ತು ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಿರುದ್ಯೋಗ ಹೆಚ್ಚಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಧಾರವಾಡದಲ್ಲಿ ಯುವಕರ ಆಕ್ರೋಶ: ಬೀದಿಗಿಳಿದ ಅಭ್ಯರ್ಥಿಗಳು
ಉತ್ತರ ಕರ್ನಾಟಕದ ಶೈಕ್ಷಣಿಕ ಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಕಟ್ಟೆಯೊಡೆದಿದೆ. ಪಿಜಿ ಮತ್ತು ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ಕೆಪಿಎಸ್‌ಸಿ (KPSC), ಪೊಲೀಸ್ ಇಲಾಖೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಯುವಕರು ನೇಮಕಾತಿ ಅಧಿಸೂಚನೆ ಹೊರಬೀಳದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications