ಅರಮನೆ ಭೂಮಿಗಾಗಿ ರಾಜಮನೆತನಕ್ಕೆ 3000 ಕೋಟಿ ನೀಡಲು ಸರ್ಕಾರ ನಿರ್ಧಾರ
ಬೆಂಗಳೂರು ಡಿಸೆಂಬರ್ 11: ಬಳ್ಳಾರಿ ರಸ್ತೆ ಅಗಲೀಕರಣಕ್ಕಾಗಿ ಅರಮನೆಯ 15 ಎಕರೆ 39 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಭಾರೀ ಮೊತ್ತದ ಪರಿಹಾರ ನೀಡಲು ಮುಂದಾಗಿದೆ. ಅರಮನೆ ವಾರಸುದಾರರಿಗೆ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರದ ರೂಪದಲ್ಲಿ ಮುಂದಿನ ಆರು ದಿನಗಳಲ್ಲಿ 3,000 ಕೋಟಿ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಹೌದು... ಬೆಂಗಳೂರಿನ ಹೃದಯ ಭಾಗವಾಗಿರುವ ಅರಮನೆ ಸುತ್ತಮುತ್ತಲಿನ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣದ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳನ್ನು ವಿಸ್ತರಿಸಲು ಅರಮನೆ ಮೈದಾನದ 15 ಎಕರೆ 39 ಗುಂಟೆ ಭೂಮಿಯನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಭೂಮಿಗೆ ಪರಿಹಾರವಾಗಿ 3,000 ಕೋಟಿ ರೂಪಾಯಿಯನ್ನು ಭೂ ಮಾಲೀಕರಿಗೆ ಅಂದರೆ ಅರಮನೆ ವಾರಸುದಾರರಿಗೆ ಮುಂದಿನ ಆರು ದಿನಗಳಲ್ಲಿ ನೀಡಲು ಸರ್ಕಾರ ತೀರ್ಮಾನಿಸಿದೆ.

ಅರಮನೆಗೆ ಸಂಬಂಧಿಸಿದ ಭೂಮಿಯಾದ್ದರಿಂದ ಸರ್ಕಾರ ಭಾರೀ ಮೊತ್ತದ ಹಣ ನೀಡುತ್ತಿದೆ. ಆದರೆ ಈ ಭೂಮಿ ರೈತರದ್ದಾಗಿದ್ದರೆ ಸರ್ಕಾರ ಇಷ್ಟೊಂದು ಹಣ ನೀಡುತ್ತಿರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಅರ್ಕಾವತಿ, ಕೆಂಪೇಗೌಡ, ಶಿವರಾಮ ಕಾರಂತ ಮುಂತಾದ ಬಡಾವಣೆಗಳ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರು ಇಂದಿಗೂ ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಭೂ ಸ್ವಾಧೀನ ವಿಚಾರದಲ್ಲಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಂದಹಾಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ ಬೆಂಗಳೂರು ಅರಮನೆ ಭೂಮಿಗೆ ಪ್ರತಿ ಚದರ ಮೀಟರ್‌ಗೆ 2,83,500 ರೂಪಾಯಿ ಮತ್ತು ಜಯಮಹಲ್ ರಸ್ತೆಗೆ ಹೊಂದಿಕೊಂಡಿರುವ ಭೂಮಿಗೆ ಪ್ರತಿ ಚದರ ಮೀಟರ್‌ಗೆ 2,04,000 ರೂಪಾಯಿ ಮೌಲ್ಯವನ್ನು ನಿಗದಿಪಡಿಸಬೇಕಾಗಿದೆ. ಇದರ ಪ್ರಕಾರ ಸರ್ಕಾರ ಭೂ ಮಾಲೀಕರಿಗೆ ಸರಿಸುಮಾರು 3,000 ಕೋಟಿ ರೂಪಾಯಿ ಅಥವಾ ಪ್ರತಿ ಎಕರೆಗೆ 194 ಕೋಟಿ ರೂಪಾಯಿಗಳ ಟಿಡಿಆರ್ ಪರಿಹಾರ ನೀಡಬೇಕಾಗುತ್ತದೆ. ರಸ್ತೆ ಮಾತ್ರವಲ್ಲದೆ ಈ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳನ್ನೂ ನಿರ್ಮಾಣ ಮಾಡಲಾಗುತ್ತದೆ. ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಎರಡೂ ಬದಿಯ ರಸ್ತೆಗಳನ್ನು ವಿಸ್ತರಗೊಳಿಸಲು ಈ ಭೂಮಿ ಬಳಕೆಯಾಗಲಿದೆ. ಈ ಜಾಗದಲ್ಲಿ ಜಯಮಹಲ್ ಮತ್ತು ಬಳ್ಳಾರಿ ರಸ್ತೆಗಳ ವಿಸ್ತರಣೆಯಾಗಲಿದೆ.

ರಿಯಲ್ ಎಸ್ಟೇಟ್ ಲಾಬಿ?
ಏಪ್ರಿಲ್ 2024 ರಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1996 ರ ಪ್ರಕಾರ ಪ್ರತಿ ಚದರ ಮೀಟರ್‌ಗೆ 120.68 ರೂಪಾಯಿಯಂತೆ ಅರಮನೆಯ ಭೂಮಿಯ ಮೌಲ್ಯವನ್ನು ನಿರ್ಧರಿಸಿತು.
ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಲು ಪಕ್ಕದ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗದರ್ಶಿ ಮೌಲ್ಯವನ್ನು ಗಣನೆಗೆ ತೆಗೆದುಕೊಂಡಿದೆ. ಇದು ಸರ್ಕಾರದ ಅಂದಾಜುಗಿಂತ ಸರಿಸುಮಾರು 2,00,000 ಪಟ್ಟು ಹೆಚ್ಚಾಗಿದೆ. ಇದರಲ್ಲಿ ರಿಯಲ್ ಎಸ್ಟೇಟ್ ಲಾಬಿ ಕೂಡ ನಡೆದಿದೆ ಎನ್ನುವ ಆರೋಪಗಳು ಇವೆ.
ಹಿಂದೆ 2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಸ್ತೆ ವಿಸ್ತರಣೆಗಾಗಿ ಅರಮನೆ ಭೂಮಿಯನ್ನು ವಶಪಡಿಸಿಕೊಳ್ಳಲು ನಿರ್ಧರಿಸಿತ್ತು. ನಂತರ ರಚನೆಯಾದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರ ಸೆಪ್ಟೆಂಬರ್‌ನಲ್ಲಿ ಎರಡೂ ಬದಿಯ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಬಿಟ್ಟಿರುವುದಾಗಿ ಆದೇಶ ಹೊರಡಿಸಿತ್ತು. ದೊಡ್ಡ ಮೊತ್ತದ ಟಿಡಿಆರ್ ನೀಡಬೇಕಾಗುತ್ತದೆ ಎಂಬ ಕಾರಣವನ್ನು ನೀಡಿ ರಸ್ತೆ ಅಗಲೀಕರಣವನ್ನು ಕೈ ಬಿಟ್ಟಿತ್ತು. ಈಗ ಇದೇ ಪ್ರಕ್ರಿಯೆ ನಡೆದಿದೆ.












Click it and Unblock the Notifications