ಮೇವು ಒದಗಿಸಲಾಗುವುದಿಲ್ಲ, ಗೋವುಗಳನ್ನು ಮಾರಿಬಿಡ್ರೀ.. ಅತ್ಲಾಗೆ!

Written By:
Subscribe to Oneindia Kannada

ಕೊಳ್ಳೇಗಾಲ, ಏ 21: ' ಗೋವುಗಳಿಗೆ ಮೇವನ್ನು ಒದಗಿಸಲಾಗುವುದಿಲ್ಲ, ಗೋವುಗಳನ್ನು ಮಾರಿ.. ಅತ್ಲಾಗೆ' ಇದು ಕೊಳ್ಳೆಗಾಲ ತಾಲೂಕು, ಕೊಡಕೆಹಳ್ಳಕ್ಕೆ ಆಗಮಿಸಿದ್ದ ಕೊಳ್ಳೇಗಾಲದ ಎಸಿ ನಳಿನ್ ಅತುಲ್ ರೈತರಿಗೆ ನೀಡಿದ ಉಚಿತ ಸಲಹೆ!

ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಲಕ್ಷಾಂತರ ಗೋವುಗಳು ಪ್ರಾಣಾಪಾಯದಲ್ಲಿದೆ, ಬೆಟ್ಟದಲ್ಲಿ ಗೋವಿಗೆ ಮೊದಲಿನಂತೆ ಮೇಯಲು ಬಿಡಿ ಎಂದು ರೈತರು ಮತ್ತು ಮೇವು ವಿತರಿಸುತ್ತಿರುವ ರಾಮಚಂದ್ರಾಪುರಮಠದ ಕಾರ್ಯಕರ್ತರು ಆಗ್ರಹಿಸಿದಾಗ ಸರ್ಕಾರಿ ಅಧಿಕಾರಿ ಅತುಲ್ ನೀಡಿದ ಉತ್ತರ ಕೇಳಿ ರೈತರು, ಗೋಪಾಲಕರು ಫುಲ್ ಶಾಕ್.

ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಸೋಲಿಗರು ಸೇರಿದಂತೆ ಅನೇಕ ಹಿಂದುಳಿದ ಸಮುದಾಯದವರು ಬರಗೂರು, ಆಲಂಬಾಡಿ, ಹಳ್ಳಿಕಾರ್ ತಳಿಯ ಗೋವುಗಳನ್ನು ಪಾರಂಪರಿಕವಾಗಿ ಬೆಟ್ಟದಲ್ಲಿ ಮೇಯಿಸಿ ಸಾಕುತ್ತಾ ಬಂದಿದ್ದು, ಲಕ್ಷಾಂತರ ಗೋವುಗಳನ್ನು ಪಾಲಿಸುತ್ತಿದ್ದಾರೆ.

Government cannot supply fodder, better you sell cows: Kollegala AC reply to farmers

ಪ್ರಸ್ತುತ ತೀವ್ರ ಬರಗಾಲ ಒಂದೆಡೆಯಾದರೆ, ಇನ್ನೊಂದೆಡೆ ಬೆಟ್ಟಕ್ಕೆ ಬೇಲಿಹಾಕಿ ಸರ್ಕಾರವೇ ಕೃತಕ ಬರವನ್ನು ಸೃಷ್ಟಿಸಿದೆ. ಹಿಂದುಳಿದ ವರ್ಗದ ಗೋಪಾಲಕರು ಪಾರಂಪರಿಕವಾಗಿ ಬೆಟ್ಟದಲ್ಲಿ ಗೋವನ್ನು ಮೇಯಿಸಿ ಗೋಸಂರಕ್ಷಣೆಯನ್ನಷ್ಟೇ ಅಲ್ಲ, ಕಾಡನ್ನು ಜತನದಿಂದ ಪೋಷಿಸುತ್ತಾ ಬಂದಿದ್ದಾರೆ.

ಹೀಗಾಗಿ ಬೆಟ್ಟಕ್ಕೆ ಹಾಕಿರುವ ಬೇಲಿಯನ್ನು ತೆಗೆದು ಗೋವಿಗೆ ಮೇಯಲು ಅವಕಾಶ ಮಾಡಿಕೊಡಬೇಕು ಎಂದು ರಾಮಚಂದ್ರಾಪುರಮಠ ಜನವರಿಯಿಂದಲೇ ಆಗ್ರಹಿಸುತ್ತಾ ಬಂದಿದೆಯಾದರೂ, ಸೊಪ್ಪು ಹಾಕದ ಸರ್ಕಾರ, ಇದೀಗ ಗೋವುಗಳನ್ನೇ ಮಾರಿ ಎಂಬ ಉಚಿತ ಸಲಹೆಯನ್ನು ನೀಡುತ್ತಿದೆ.

Wildlife Protection Act 1972 ರ ಪ್ರಕಾರ ಅಭಯಾರಣ್ಯಕ್ಕೆ ಜಾನುವಾರುಗಳ ಪ್ರವೇಶವನ್ನು ನಿರ್ಬಂಧಿಸಲೇಬೇಕು ಎಂದಿಲ್ಲ. ಅದು ಅರಣ್ಯಾಧಿಕಾರಿಯ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಮೇಯಲು ಅವಕಾಶ ನೀಡಬಹುದಾಗಿದೆ.

ಮೇವಿಲ್ಲದೇ ಲಕ್ಷಾಂತರ ಗೋವುಗಳ ಮಾರಣಹೋಮ ನಡೆಯುತ್ತಾ ಇದ್ದರು, ಸರ್ಕಾರ ಬೇಲಿಯನ್ನು ತೆರವುಗೊಳಿಸಿ ಗೋವುಗಳಿಗೆ ಮೇಯಲು ಅವಕಾಶವನ್ನು ಮಾಡುತ್ತಲೇ ಇಲ್ಲ ಎಂದು ರಾಮಚಂದ್ರಾಪುರ ಮಠದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ 48ನೇ ಪರಿಚ್ಚೇದದಲ್ಲಿಯೂ ಗೋಸಂರಕ್ಷಣೆ ಮಾಡುವಂತೆ, ತಳಿಗಳ ಸಂವರ್ಧನೆ ಮಾಡುವಂತೆ ಸರ್ಕಾರಗಳಿಗೆ ಸೂಚಿಸಲಾಗಿದೆ, ಆದರೆ ನಮ್ಮ ಸರ್ಕಾರ ಬೆಟ್ಟದ ಬೇಲಿಯನ್ನೂ ತೆಗೆಯದೇ, ಸಮರ್ಪಕವಾಗಿ ಮೇವನ್ನೂ ಒದಗಿಸದೇ ಬರಗೂರು, ಆಲಂಬಾಡಿ, ಹಳ್ಳಿಕಾರ್ ತಳಿಗಳ ವಿನಾಶಕ್ಕೆ ಮುನ್ನುಡಿ ಬರೆಯುತ್ತಿದೆ.

ಸರ್ಕಾರ, ಗೋಶಾಲೆ ಮಾಡುತ್ತೇವೆ, ಮೇವನ್ನು ಒದಗಿಸುತ್ತೇವೆ ಎಂದು ಮಾತಿನಲ್ಲಿಯೇ ಮನೆ ಕಟ್ಟುತ್ತಿದ್ದಾರೆ, ಇತ್ತ ಕೊಳ್ಳೇಗಾಲದ ದಂಡಾಧಿಕಾರಿಗಳು ಒಂದು ಹೆಜ್ಜೆ ಮುಂದೆಹೋಗಿ, 'ಮೇವು ಒದಗಿಸಲಾಗುವುದಿಲ್ಲ, ಗೋವುಗಳನ್ನು ಮಾರಿ' ಎನ್ನುತ್ತಿರುವುದು ರೈತರಿಗೆ, ಗೋಪಾಲಕರಿಗೆ ದಾರಿತೋಚದಂತಾಗಿದೆ ಎಂದು ಮಠದ ಕಾರ್ಯಕರ್ತರು ನೋವು ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Government cannot supply fodder, better you sell cows: Kollegala AC reply to farmers.
Please Wait while comments are loading...