'ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್: ಗೊರವಯ್ಯ ಕಾರ್ಣಿಕ ಯಾವುದರ ಮುನ್ಸೂಚನೆ?
ಹಾವೇರಿ, ಅಕ್ಟೋಬರ್ 12: ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದ ಕಾರ್ಣಿಕೋತ್ಸವದಲ್ಲಿ 'ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ಮಾಲತೇಶಸ್ವಾಮಿ ದೇವಸ್ಥಾನಲ್ಲಿ ಗೊರವಯ್ಯ ಈ ಕಾರ್ಣಿಕದ ನುಡಿ ನುಡಿದಿದ್ದಾನೆ. ಪ್ರತಿ ವರ್ಷ ನವರಾತ್ರಿ ವೇಳೆ ಭವಿಷ್ಯವಾಣಿ ನುಡಿಯುವ ಗೊರವಯ್ಯ 9 ದಿನ ಉಪವಾಸ ವಿದ್ದು ಸಾವಿರಾರು ಭಕ್ತರ ಸಮ್ಮುಖದಲ್ಲಿ 18 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದಾರೆ,

ಕಾರ್ಣಿಕ ನುಡಿ ಕುರಿತು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಅವರು ಹೇಳಿಕೆ ನೀಡಿದ್ದು.. ಆಕಾಶದತ್ತ ಚಿಗುರಿತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್... ಆಕಾಶದತ್ತ ಚಿಗುರಿತಲೇ ಅಂದರೆ ಒಳ್ಳೆ ಮಳೆ ಆಗುತ್ತೆ, ಬೇರೆಲ್ಲಾ ಮುತ್ತಾಯಿತಲೇ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ, ಅದನ್ನ ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆದಾಗುತ್ತೆ ಎಂಬ ಅರ್ಥದಲ್ಲಿ ತಿಳಿಸಿದ್ದಾರೆ.
ಇನ್ನೂ ರಾಜಕೀಯವಾಗಿ ಹೇಳುವುದಾದರೇ ಆಕಾಶದತ್ತ ಚಿಗುರೀತಲೇ, ಅಂದರೆ ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ ಬೇರೆಲ್ಲಾ ಮುತ್ತಾಯಿತಲೇ ಅಂದರೆ ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರೋದು ನೀವೆಲ್ಲಾ ನೋಡಿರಬಹುದು ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ ಅಂತ ಬೇರುಗಳೆಲ್ಲಾ ಮುತ್ತಾಯಿತಲೇ ಅಂದರೆ ಆಕಾಶತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ತಾವೆ ಅಂತ ಅರ್ಥದಲ್ಲಿ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನ ಗೊರವಯ್ಯ ಕಾರ್ಣಿಕವನ್ನ ವ್ಯಾಕ್ಯಾನಿಸಿದರು
ವಿಷ ಜಂತುಗಳ ಪರಿಹಾರಕ, ಕಾಡುಗೊಲ್ಲರ ಧಾರ್ಮಿಕ ಕ್ಷೇತ್ರ ಹಾರನಕಣಿವೆ
ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದ ಮೇಲ್ಭಾಗದ ಹಾಗೂ ಹೊಸದುರ್ಗ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ, ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿಯ ಅಂಬಿನೋತ್ಸವ ಅಕ್ಟೋಬರ್ 13 ರಂದು ಭಾನುವಾರ ಜರುಗಲಿದೆ.
ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಗುತ್ತದೆ. ಇದಾದ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಿದ ನಂತರ ಪೂಜಾರಿಯು ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಗಿಡ ಕಡಿದು, ಬನ್ನಿ ಮುಡಿಯುವ ಅಂಬಿನೋತ್ಸವ ಕಾರ್ಯ ವಿಜೃಂಭಣೆಯಿಂದ ನೇರವೇರುತ್ತದೆ.
ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಯ ಹಿರಿಯೂರಿನಿಂದ ಹೊಸದುರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಎಡಭಾಗದ ವಿವಿ ಸಾಗರ ಜಲಾಶಯದ ಪಕ್ಕದ ಕಾಡು ಮೇಡಿನಲ್ಲಿ ನೆಲೆಸಿರುವ ಹಾರನಕಣಿವೆ ಶ್ರೀ ರಂಗಯ್ಯನೊಬ್ಬ ಪವಾಡ ಪುರುಷನೆಂದೇ ಪ್ರತೀತಿ . ಪ್ರತಿ ವರ್ಷ ಆಶ್ವೀಜ ಶುದ್ಧ ಏಕಾದಶಿಯ ವಿಜಯದಶಮಿಯಂದು ಅಂಬಿನೋತ್ಸವ ನೆರವೇರಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಸ್ವಾಮಿಯ ದರ್ಶನ ಪಡೆಯುತ್ತಾರೆ. ಮಧ್ಯ ಕರ್ನಾಟಕದ ಬುಡುಕಟ್ಟು ಕಾಡುಗೊಲ್ಲರ ಧಾರ್ಮಿಕ ಕೇಂದ್ರವಾದ ಈ ದೇವಾಲಯದ ಮಹಿಮೆ ಅಪಾರವಾಗಿದೆ. ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ಶ್ರೀ ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಿದ್ದು ನಂಬಿ ಬಂದವರನ್ನು ರಂಗಯ್ಯ ಎಂದೂ ಕೈ ಬಿಟ್ಟಿಲ್ಲ ಎನ್ನುವುದು ಭಕ್ತರ ಬಲವಾದ ನಂಬಿಕೆಯಾಗಿದೆ.
ವಿಷ ಜಂತುಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ ಸಾವು ಬದುಕಿನ ನಡುವೆ ಹೋರಾಟ ನಡೆಸಿ ರಂಗಪ್ಪನ ಸನ್ನಿಧಿಗೆ ಬಂದವರಿಗೆ ಸ್ವಾಮಿಯ ಪವಾಡದಿಂದ ಗುಣಮುಖವಾದ ಅದೆಷ್ಟೋ ಉದಾಹರಣೆಗಳಿರುವುದರಿಂದ ರಂಗನಾಥ ಸ್ವಾಮಿಯನ್ನು ವಿಷ ಜಂತುಗಳ ಪರಿಹಾರಕ ಎಂತಲೂ ಕರೆಯುವುದುಂಟು. ಮನೆ, ಹೊಲ, ಗದ್ದೆಗಳಲ್ಲಿ ವಿಷ ಜಂತುಗಳು ಕಾಣಿಸಿಕೊಂಡಾಗ ಅಥವಾ ಕಚ್ಚಿದಾಗ ಈ ಭಾಗದ ಜನರಿಗೆ ಮೊದಲು ನೆನಪಾಗುವುದು ಹಾರನಕಣಿವೆ ರಂಗಪ್ಪ. ವಿಷಜಂತುಗಳು ಕಚ್ಚಿದಾಗ ಸ್ವಾಮಿಯ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳಗಳನ್ನು ಅರ್ಪಿಸುತ್ತೇವೆಂದು ಹರಕೆ ಕಟ್ಟಿಕೊಂಡು ಅಂಬಿನೋತ್ಸವ ದಿನದಂದು ಚಿನ್ನ, ಬೆಳ್ಳಿ, ತಾಮ್ರದ ಹಾವು, ಚೇಳು, ಜರಿಗಳನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸುವ ದೃಶ್ಯ ಗಮನ ಸೆಳೆಯುತ್ತದೆ.
ಉತ್ತಮ ಮಳೆಯಾಗಿ ಸಮೃದ್ಧ ಫಸಲಿಗೆ ಹಾಗೂ ಆರೋಗ್ಯ ಸುಧಾರಣೆಗಾಗಿ ಭಕ್ತರು ಗೊನೆಗಟ್ಟಲೆ ಬಾಳೆಹಣ್ಣು ಸಕ್ಕರೆಯ ನೈವೇದ್ಯ ಮಾಡುವ ಮೂಲಕ ಮತ್ತೊಂದು ಹರಕೆಯನ್ನು ರಂಗನಾಥನಿಗೆ ತಿರಿಸುತ್ತಾರೆ. ಭಕ್ತರು ತಂದ ಸಕ್ಕರೆ, ಬಾಳೆಹಣ್ಣನ್ನು ಹಸಿರು ಗಿಡಗಳ ಬುಡದಲ್ಲಿ ಬಾಳೆ ಎಲೆ ಹಾಕಿ ಅದರಲ್ಲಿ ಬಾಳೆಹಣ್ಣಿನ ರಸಾಯನ ಮಾಡಿ ಪೂಜೆ ಮಾಡಿದ ಬಳಿಕ ದಾಸಯ್ಯನಿಗೆ ನೀಡಿ ನಂತರ ಅಲ್ಲಿದ್ದ ಜನರಿಗೆ ಹಂಚುವುದು ಜಾತ್ರೆಯ ಮತ್ತೊಂದು ವಿಶೇಷತೆಯಾಗಿದೆ.












Click it and Unblock the Notifications